Friday, November 20, 2026

ಪ್ರಾಯೋಗಿಕ ಆವೃತ್ತಿ

ಐಶ್ವರ್ಯಗೌಡ ಜೊತೆ ಕಾಂಗ್ರೆಸ್ ಮುಖಂಡರ ವ್ಯವಹಾರ : ಅನ್ನದಾನಿ ಆರೋಪ

ರಾಜ್ಯದಾದ್ಯಂತ ಸುದ್ದಿಯಾಗಿರುವ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದ ವಂಚನೆ ಆರೋಪಿ ಐಶ್ವರ್ಯಗೌಡ ಅವರನ್ನು ರಾಜ್ಯದ ಪೊಲೀಸರು ಬಂಧಿಸಲಾಗಿದ್ದು, ಈಕೆಯೊಂದಿಗಿನ ಹಣಕಾಸು ಅವ್ಯವಹಾರದಲ್ಲಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ತನಿಖೆ ಸರಿಯಾದ ಹಾದಿಯಲ್ಲಿ ಕೊಂಡೊಯ್ಯಬೇಕು. ಐಶ್ವರ್ಯಗೌಡ ಅಲಿಯಾಸ್ ನವ್ಯಶ್ರೀ ಅವರ ಅನಾಚಾರಗಳು ಕಿರುಗಾವಲು ಗ್ರಾಮದಿಂದಲೇ ಪ್ರಾರಂಭವಾಗಿದ್ದು, ಅವರೊಟ್ಟಿಗೆ ಇಲ್ಲಿಂದಲೇ ಹಲವು ಸ್ಥಳೀಯ ಕಾಂಗ್ರೆಸ್ಸಿಗರು ಕೈಜೋಡಿಸಿದ್ದರು. ಅವರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ಸಿಗರು ಮಾತ್ರ ಭಾಗವಹಿಸಿರುವ ಭಾವಚಿತ್ರಗಳು ಇವೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ಪ್ರವಾಸ
ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರೂ ಆದ ಹೆಚ್.ಡಿ.ಕುಮಾರಸ್ವಾಮಿ ಅವರು ಜನವರಿ 5ರಂದು ಮಳವಳ್ಳಿ ತಾಲೂಕಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಅರ್ಪಿಸಲಿದ್ದಾರೆ ಎಂದರು.ಮಳವಳ್ಳಿ ತಾಲೂಕಿನ ಕಿರುಗಾವಲು ಸಂತೆಮಾಳ, ಪಟ್ಟಣದ ಎ ವೃತ್ತ, ಕಸಬಾ(ಹಾಡ್ಲಿ) ವೃತ್ತ ಮತ್ತು ಹಲಗೂರು ಹೋಬಳಿ ಕೇಂದ್ರಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಸಚಿವರು ಸಂಸತ್ತಿಗೆ ಆಯ್ಕೆಯಾಗಿ 5-6 ತಿಂಗಳುಗಳಾಗಿದ್ದು, ಅವರ ಕೇಂದ್ರದಲ್ಲಿ ಎರಡು ಖಾತೆಗಳನ್ನು ನಿಭಾಯಿಸಿದ್ದರಿಂದ ಕೃತಜ್ಞತೆ ಸಲ್ಲಿಸಲು ತಡವಾಗಿದೆ. ಅದಕ್ಕೆ ಸಚಿವರ ಪರವಾಗಿ ಕ್ಷಮೆ ಕೋರುತ್ತೇನೆ. ಆದ್ದರಿಂದ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಈ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಮಳವಳ್ಳಿ ತಾಲೂಕಿನ ಕಾಂಗ್ರೆಸ್ ನಾಯಕರು ಐಶ್ವರ್ಯ ಗೌಡ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರಿಂದ ಆತಿಥ್ಯ ಸ್ವೀಕರಿಸಿದ್ದಾರೆ. ಈ ಸಂಬಂಧ ತಾಲೂಕಿನ ನಾಯಕರ ಹೆಸರು ಮಾಧ್ಯಮಗಳಲ್ಲಿ ಬಹಿರಂಗಗೊಂಡಿದ್ದು, ಕಾಲ ಕ್ರಮೇಣ ಬದಲಾಗಿವೆ. ಕಾಂಗ್ರೆಸ್ ಶಾಸಕರಾದ ವಿನಯ್ ಕುಲಕರ್ಣಿ, ನರೇಂದ್ರಸ್ವಾಮಿ ಹೆಸರುಗಳು ಬಹಿರಂಗಗೊಂಡಿದ್ದವು. ಇದು ತಾಲೂಕಿನ ಮುಖಂಡರು ಐಶ್ವರ್ಯಗೌಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಮಂಡ್ಯ ಜಿಲ್ಲೆಯಲ್ಲಿಯೂ ಐಶ್ವರ್ಯಗೌಡ ಅವರಿಂದ ವಂಚಿತರಾಗಿರುವ 4 ಪ್ರಕರಣಗಳಿವೆ. 2023ರ ಸಾರ್ವತ್ರಿಕ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಐಶ್ವರ್ಯಗೌಡ ಅವರ ನಡುವೆ ಹಣದ ವ್ಯವಹಾರ ನಡೆದಿದೆ ಎಂಬ ಗುಮಾನಿಯಿದೆ ಎಂದು ಗಂಭೀರ ಆರೋಪಿಸಿದರು.

ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಐಶ್ವರ್ಯಗೌಡ ವಿರುದ್ಧ 2-3 ದೂರು ದಾಖಲಾಗಿದೆ. ಅವರ ಹಣಕಾಸು ಹಾಗೂ ಚಿನ್ನದ ವ್ಯವಹಾರದಲ್ಲಿ ಕಾಂಗ್ರೆಸ್ಸಿಗರು ಬೆಂಬಲ ನೀಡಿದ್ದರಿಂದಾಗಿ ಇಂದು ಐಶ್ವರ್ಯಗೌಡ ರಾಜ್ಯ ಮಟ್ಟದಲ್ಲಿ ಅನ್ಯಾಯ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಸಿದ್ದಾಂತ ಹೊರತು ಪಡಿಸಿ, ಯಾರ ಸಿದ್ದಾಂತ ನಡೆಯಬೇಕು, ಯಾವ ಸಿದ್ದಾಂತವನ್ನು ಪಾಲಿಸಬೇಕು ಎಂಬುದನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಸ್ತಾಪಿಸಿದ್ದು, ಅಂಬೇಡ್ಕರ್ ಸಿದ್ದಾಂತ ಪಾಲಿಸಿದ ಅವರು ಅಂಬೇಡ್ಕರ್ ಅವರ ಮೀಸಲಾತಿಯಿಂದ ಗೆದ್ದ ಅವರಿಗೆ ಶಾಸಕ ಸ್ಥಾನದಲ್ಲಿ ಮುಂದುವರೆಯಲು ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಮಳವಳ್ಳಿ ಜೆಡಿಎಸ್ ಕಾರ್ಯಾಧ್ಯಕ್ಷ ಚಿಕ್ಕಮಲಗೂಡು ಪುಟ್ಟಬುದ್ದಿ, ಯುವ ಜನತಾದಳ ಅಧ್ಯಕ್ಷ ಶ್ರೀಧರ್, ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಜಯರಾಂ, ಮಾಜಿ ಜಿ.ಪಂ ಸದಸ್ಯ ಹನುಮಂತು, ಕಾಂತರಾಜು, ಸಿದ್ದಾಚಾರಿ, ಕಿರುಗಾವಲು ಪ್ರಕಾಶ್, ನಾಗರಾಜು, ವೇಣುಗೋಪಾಲ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ