ಮಂಡ್ಯನಗರ ಕೆರೆಯಂಗಳದಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ಖರೀದಿಗೆ 10 ಲಕ್ಷ ರೂ.ಗಳನ್ನು ನೀಡುವುದಾಗಿ ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು.
ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸವಿತಾ ಸಮಾಜದ ಅಭಿಮಾನಿಗಳು ಆಯೋಜಿಸಿದ್ದ ರವಿಕುಮಾರ್ ಗಣಿಗ ಜನ್ಮದಿನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಸಣ್ಣ ಹಿಂದುಳಿದ ಜಾತಿಗಳು ಅಭಿವೃದ್ದಿ ಹೊಂದಬೇಕು ಎಂಬುದು ಮಾಜಿ ಸಿಎಂ ದೇವರಾಜ ಅರಸು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯವಾಗಿದೆ. ಹಾಗಾಗಿ ಸಮುದಾಯ ಭವನದ ನಿರ್ಮಾಣಕ್ಕೆ ಸರ್ಕಾರ ಒತ್ತು ನೀಡಿದೆ ಎಂದರು.
ಇದುವರೆಗೆ ಮಂಡ್ಯದಲ್ಲಿ 6 ಸಣ್ಣ ಸಣ್ಣ ಸಮುದಾಯಗಳ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ 3 ವರ್ಷಗಳಲ್ಲಿ ಮಂಡ್ಯದಲ್ಲಿ ಸುಮಾರು 5 ಸಾವಿರ ಮನೆಗಳನ್ನು ನಿರ್ಮಿಸಿ ಎಲ್ಲಾ ಜಾತಿಯ ವಸತಿ ರಹಿತರಿಗೆ ಹಂಚಿಕೆ ಮಾಡಲಾಗಿವುದು. ನಾನು ಶಾಸಕನಾದ ಒಂದೂವರೆ ವರ್ಷದಲ್ಲಿ ಮಂಡ್ಯ ಕ್ಷೇತ್ರದ ಅಭಿವೃದ್ದಿಗಾಗಿ 400 ಕೋಟಿ ರೂ. ಅನುದಾನವನ್ನು ತಂದಿದ್ದೇನೆ, ಮುಂದಿನ ದಿನಗಳಲ್ಲಿ ಮಂಡ್ಯ ಇನ್ನೂ ಹೆಚ್ಚು ಅಭಿವೃದ್ದಿ ಹೊಂದಿದಾಗ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳೋಣ. ಅಲ್ಲಿಯವರೆಗೆ ನಾನು ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ಸಮಾಜದ ಮುಖಂಡ ಲೋಕೇಶ್.ಜಿ.ಬಿ.ವಹಿಸಿದ್ದರು. ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಸಾಧಕರುಗಳಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮನ್ ಮುಲ್ ನಿರ್ದೇಶಕರಾದ ಯು.ಸಿ.ಶಿವಕುಮಾರ್, ಮುಡಾ ಅಧ್ಯಕ್ಷ ನಯೀಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಕನ್ನಡ ಸಹ ಪ್ರಾಧ್ಯಪಕರಾದ ಕೆಂಪಮ್ಮ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್. ಮಂಜು, ಕಾಂಗ್ರೆಸ್ ಮುಖಂಡರಾದ ಮುನವರ್ ಪಾಷ, ಮಹೇಶ್, ಆದರ್ಶ್, ನಗರಸಭೆ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.




