ರಾಜ್ಯದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಮಾವೋವಾದಿ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ 6 ಮಂದಿ ನಕ್ಸಲರು ಬುಧವಾರ ಸಂಜೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶಸ್ತ್ರಾಸ್ತ್ರ ಹೋರಾಟ ತ್ಯಜಿಸಿ, ಸಮಾಜದ ಮುಖ್ಯವಾಹಿನಿಗೆ ಅಡಿಯಿಟ್ಟರು. ಈ ಘಟನೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಸಾಕ್ಷಿಯಾಯಿತು.

ಮೊದಲಿಗೆ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ನಕ್ಸಲರಿಗೆ ಶರಣಾಗತಿ ಪ್ಯಾಕೇಜ್ ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ, ಸಿಎಂ ಸಿದ್ದರಾಮಯ್ಯ ಅವರಿಗೆ ಹೂಗುಚ್ಚ ನೀಡಿದರು. ಆನಂತರ ಮುಖ್ಯಮಂತ್ರಿಗಳು ಆರು ಜನ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಜಯಣ್ಣ ಅರೋಲಿ, ಕೆ.ವಸಂತ ಟಿ.ಎನ್ ಹಾಗೂ ಜೀಶ್ ಅವರಿಗೆ ಗುಲಾಬಿ ಹೂಗಳನ್ನು ನೀಡುವ ಮೂಲಕ ನಾಗರಿಕ ಸಮಾಜಕ್ಕೆ ಸ್ವಾಗತಿಸಿದರು.
ಈ ಸಂದರ್ಭ ಸಿಎಂ ಮಾತನಾಡಿ, ನಕ್ಸಲರು ನಮ್ಮ ಪ್ಯಾಕೇಜ್ ಒಪ್ಪಿ ಶರಣಾಗಿದ್ದಾರೆ. ಅವರಿಗೆ ಸರ್ಕಾರ ಎಲ್ಲ ನೆರವನ್ನು ನೀಡಲಿದೆ. ಅವರು ಸಂವಿಧಾನಕ್ಕೆ ನಾಗರಿಕ ಸಮಾಜದಲ್ಲಿದ್ದುಕೊಂಡು ಮಾಡುವ ಹೋರಾಟಕ್ಕೆ ಅಭ್ಯಂತರವಿಲ್ಲ ಎಂದರು.

ಶರಣಾಗತಿ ನಂತರ ಮುಂದೇನು ?
ಶರಣಾಗತರಾದ ನಕ್ಸಲರ ವಿರುದ್ಧ ಇರುವ ಘೋರ ಅಪರಾಧಗಳ ಕಾನೂನು ಪ್ರಕ್ರಿಯೆ ನ್ಯಾಯಾಲಯದಲ್ಲಿ ಮುಂದುವರಿಯುತ್ತವೆ. ರಾಜ್ಯ ಸರ್ಕಾರವು ಸರಿಯಾದ ಕಾರ್ಯ ವಿಧಾನಗಳ ಮೂಲಕ ಶರಣಾದ ನಕ್ಸಲರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಂಪಡೆಯಲು ಪರಿಗಣಿಸಬಹುದು. ಶರಣಾದ ನಕ್ಸಲರಿಗೆ ಉಚಿತ ಕಾನೂನು ಸಹಕಾರ ನೀಡಲು ವಕೀಲರನ್ನು ಒದಗಿಸಬಹುದು. ಅಲ್ಲದೆ ತ್ವರಿತ ವಿಚಾರಣೆಗಾಗಿ ತ್ವರಿತಗತಿ ನ್ಯಾಯಾಲಯ ರಚನೆ ಮಾಡಲು ಸರ್ಕಾರಕ್ಕೆ ಅವಕಾಶ ಇದೆ.
ಈ ಸಂದರ್ಭದಲ್ಲಿ ಹಲವು ಸಾಹಿತಿಗಳು, ಪ್ರಗತಿಪರ ಮುಖಂಡರು ಹಾಗೂ ಹೋರಾಟಗಾರರು ಉಪಸ್ಥಿರಿದ್ದರು.








