Thursday, November 19, 2026

ಪ್ರಾಯೋಗಿಕ ಆವೃತ್ತಿ

ಮೈಸೂರು | ಗೃಹಿಣಿಯಿಂದ ಸುಲಿಗೆ ; ಇಬ್ಬರು ಪತ್ರಕರ್ತರು ಸೇರಿ ಮೂವರ ಬಂಧನ

ಗೃಹಿಣಿಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆಕೆಯ ವಿರುದ್ಧ ವೇಶ್ಯಾವಾಟಿಕೆಯ ಆರೋಪ ಹೊರಿಸಿದ್ದಲ್ಲದೆ, ತಾವು ಪೊಲೀಸರೊಂದಿಗೆ ಬಂದಿದ್ದೇವೆ ಎಂದು ಹೇಳಿಕೊಂಡು ಬೆದರಿಕೆವೊಡ್ಡಿ ಚಿನ್ನದ ಓಲೆ ಪಡೆದ ಆರೋಪದ ಮೇರೆಗೆ ಇಬ್ಬರು ಪತ್ರಕರ್ತರು ಸೇರಿ ಮೂವರನ್ನು ಮೈಸೂರಿನ ಹೆಬ್ಬಾಳ ಠಾಣೆಯ ಪೊಲೀಸರು ಜ.10ರಂದು ಶುಕ್ರವಾರ ಬಂಧಿಸಿದ್ದಾರೆ.

ಪತ್ರಕರ್ತರಾದ ರವಿಚಂದ್ರ ಹಂಚ್ಯಾ, ಮಂಜುನಾಥ್‌ ಹಾಗೂ ತಾನು ಪೊಲೀಸ್‌ ಎಂದು ಹೇಳಿಕೊಂಡಿದ್ದ ಕೆ.ಎಚ್‌. ಹನುಮಂತರಾಜ್‌ ಬಂಧಿತರು. ರವಿಚಂದ್ರ ಹಂಚ್ಯಾ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ತಲೆಮರೆಸಿಕೊಂಡಿರುವ ಇನ್ನು ಮೂವರಾದ ಪತ್ರಕರ್ತ ಸೂರ್ಯವರ್ಧನ್‌, ಯೋಗೇಶ್‌ ಹಾಗೂ ದೊರೆಸ್ವಾಮಿ ಅವರ ಪತ್ತೆಗೆ ಬಲೆ ಬೀಸಲಾಗಿದೆ.

ಈ ಆರೋಪಿಗಳು ಕಳೆದ ಡಿಸೆಂಬರ್‌ 28ರಂದು ಸಂಜೆ ನಮ್ಮ ಮನೆಗೆ ನುಗ್ಗಿ, ನಾವು ಮೀಡಿಯಾದವರು. ಪೊಲೀಸರೊಂದಿಗೆ ಬಂದಿದ್ದೇವೆ. ನೀವು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ. ನಿಮ್ಮ ವಿರುದ್ಧ ಕೇಸ್‌ ಹಾಕಿಸುತ್ತೇವೆ ಎಂದು ಬೆದರಿಸಿದರು,” ಎಂದು ಹೆಬ್ಬಾಳ ಮೊದಲನೇ ಹಂತದ ನಿವಾಸಿ ಮಹಿಳೆ ಗುರುವಾರ ರಾತ್ರಿ ಠಾಣೆಗೆ ದೂರು ನೀಡಿದ್ದರು.

“ನಾನು ವೇಶ್ಯಾವಾಟಿಕೆ ನಡೆಸುತ್ತಿಲ್ಲ ಎಂದು ಹೇಳಿದರೂ ಒಪ್ಪದೇ, ಈ ವಿಷಯವನ್ನು ಯಾರಿಗೂ ತಿಳಿಸದೆ ಇರಲು 1 ಲಕ್ಷ ರೂ. ಕೊಡಬೇಕು ಎಂದು ಬೆದರಿಸಿದರು. ಅಷ್ಟು ಹಣವಿಲ್ಲ ಎಂದು ಹೇಳಿದಾಗ ಚಿನ್ನದ ಕಿವಿಯೋಲೆಯನ್ನು ಬಿಚ್ಚಿಸಿಕೊಂಡು ಬೇಗ ಹಣ ನೀಡುವಂತೆ ತಿಳಿಸಿ ತೆರಳಿದ್ದರು,” ಎಂದು ಎಂದು ಮಹಿಳೆಯು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯ ದೂರನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ