ಬಿಜೆಪಿಯ ಕೇಂದ್ರ ಸಚಿವ ಅಮಿತ್ ಶಾ, ಅಂಬೇಡ್ಕರ್ ಅವರನ್ನು ಕುರಿತು ನೀಡಿದ ಅಪಮಾನಕರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಲಾಗದೇ ಸಮರ್ಥಿಸಿಕೊಳ್ಳುವ ಜೆಡಿಎಸ್ ನಾಯಕ ಡಾ.ಕೆ.ಅನ್ನದಾನಿಯದ್ದು ಮನುವಾದಿ ಮನಸ್ಥಿತಿಯಾದರೆ, ನಮ್ಮದು ಸಿದ್ದರಾಮಯ್ಯ ಸಿದ್ದಾಂತ ಎಂದು ಹೇಳಿಕೊಳ್ಳುವ ಶಾಸಕ ನರೇಂದ್ರಸ್ವಾಮಿ ಅವರ ಹೇಳಿಕೆಯು ರಾಜಕೀಯ ಗುಲಾಮಗಿರಿಯಿಂದ ಕೂಡಿವೆ, ಇವರಿಬ್ಬರ ಹೇಳಿಕೆಗಳು ಖಂಡನೀಯವಾಗಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ದಲಿತ, ರೈತ, ಅಲ್ಪಸಂಖ್ಯಾತ, ಕಾರ್ಮಿಕ, ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡರು, ಇಬ್ಬರು ದಲಿತ ಮುಖಂಡರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. ವಕೀಲ ಲಕ್ಷ್ಮಣ್ ಚೀರನಹಳ್ಳಿ ಮಾತನಾಡಿ, ಶಾ ಹೇಳಿಕೆಯನ್ನು ಸಂಭ್ರಮಿಸುವ ಮನುವಾದಿ ಬಿಜೆಪಿ ಮನಸ್ಥಿತಿಗೂ ಅನ್ನದಾನಿ ಹೇಳಿಕೆಗೂ ಯಾವುದೆ ವ್ಯತ್ಯಾಸ ಇಲ್ಲವಾಗಿದೆ. ಸಾಹಿತ್ಯ ಸಮ್ಮೇಳನದಂತಹ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹುಜನರ ಆಹಾರದ ಹಕ್ಕನ್ನು ನಿರಾಕರಿಸುವ ಅನ್ನದಾನಿ ಯಾವ ಮನುವಾದಿಗೂ ಕಡಿಮೆಯಿಲ್ಲ ಎಂದು ಹೇಳಿದರು.
ಅಮಿತ್ ಶಾ ಆಡಿದ ಅಪಮಾನದ ಮಾತುಗಳ ವಿರುದ್ದ ದಲಿತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಕಾಂಗ್ರೆಸ್ ಪ್ರೇರಿತ ಹಾಗೂ ಕಾಂಗ್ರೆಸ್ ನಿಂದ ಹಣ ಪಡೆದು ನಡೆಸಲಾಗುತ್ತದೆ ಎಂದು ಬಿಡು ಬೀಸು ಹೇಳಿಕೆ ನೀಡಿರುವ ಮಾಜಿ ಶಾಸಕ ಅನ್ನದಾನಿ, ದಲಿತ ಸಮುದಾಯದ ಸ್ವಾಭಿಮಾನಿ ಹೋರಾಟವನ್ನು ತಮ್ಮ ಚಿಲ್ಲರೆ ರಾಜಕಾರಣದ ಭಾಗವಾಗಿ ನೋಡುವ ಪ್ರಯತ್ನ ನಡೆಸಿದ್ದಾರೆ ದೂರಿದರು.
ದಲಿತರ ದೌರ್ಜನ್ಯದ ವಿರುದ್ದ ತುಟಿಬಿಚ್ಚದ ಅನ್ನದಾನಿ
ಜ್ಯಾದಳದ ಪರಿಶಿಷ್ಟ ಜಾತಿ ಪಂಗಡದ ಅಧ್ಯಕ್ಷರಾಗಿರುವ ಅನ್ನದಾನಿಯವರು, ಅಮಿತ್ ಶಾ ಹೇಳಿಕೆ ವಿರುದ್ದ ಇಡೀ ಜಾತ್ಯಾತೀತ ಜನತಾದಳವನ್ನು ಹೋರಾಟಕಿಳಿಸುತ್ತಾರೆಂಬ ಯಾವ ವಿಶ್ವಾಸವೂ ನಮಗಿಲ್ಲ.ಜಿಲ್ಲೆಯಲ್ಲಿ ದಲಿತರ ಮೇಲಿನ ಯಾವುದೇ ದೌರ್ಜನ್ಯದ ವಿರುದ್ದ ತುಟಿಬಿಚ್ಚದ ಅನ್ನದಾನಿಯವರು ದಲಿತ ಸಂಘಟನೆಗಳ ಹೋರಾಟಗಳಿಗೆ ಕಾಂಗ್ರೆಸ್ ಹಣ ಫೀಡ್ ಮಾಡಿದೆ ಎಂದು ಹೇಳುವ ಮೂಲಕ, ದಲಿತರ ಸ್ವಾಭಿಮಾನಿ ಹೋರಾಟವನ್ನು ಅಪಮಾನಗೊಳಿಸುವ ಹೀನಾ ಪ್ರಯತ್ನ ನಿಲ್ಲಿಸಬೇಕು. ತಮ್ಮ ಬೀಸು ಹೇಳಿಕೆಗೆ ಸಾಕ್ಷ್ಯಾ ಒದಗಿಸಬೇಕು ಇಲ್ಲವೆ ಮಂಡ್ಯ ಜಿಲ್ಲೆಯ ದಲಿತ ಸಮುದಾಯದ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ನರೇಂದ್ರ ಸ್ವಾಮಿ ಹೇಳಿಕೆಯು ರಾಜಕೀಯ ಗುಲಾಮಗಿರಿ
ದಲಿತ ಸಂಘರ್ಷ ಸಮಿತಿ ಮುಖಂಡ ಸೋಮನಹಳ್ಳಿ ಅನ್ನದಾನಿ ಮಾತನಾಡಿ, ನರೇಂದ್ರ ಸ್ವಾಮಿ ಹೇಳಿಕೆಯು ರಾಜಕೀಯ ಗುಲಾಮಗಿರಿ ಹೇಳಿಕೆಯಾಗಿದೆ. ನರೇಂದ್ರ ಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಓಲೈಸುವ ಭರಾಟೆಯಲ್ಲಿ ಸಿದ್ದರಾಮಯ್ಯನವರ ಸಿದ್ದಾಂತವೇ ಈ ರಾಜ್ಯದಲ್ಲಿ ಅಂತಿಮ ಎಂದಿದ್ದಾರೆ. ಈ ರಾಜ್ಯ ಮಾತ್ರವಲ್ಲ ಇಡೀ ಒಕ್ಕೂಟಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರರ ಸಿದ್ದಾಂತವೆ ಗೌರವಾರ್ಹವಾಗಿದೆ. ಆದರೆ ಅಧಿಕಾರದ ಹಪಾಹಪಿಯಿಂದ ಹಾಲೀ ಶಾಸಕರು ಈ ರೀತಿಯ ಬಾಲಬಡುಕ ಹೇಳಿಕೆಗಳನ್ನು ಕೊಡಬಾರದು, ತಮ್ಮನ್ನು ಅಧಿಕಾರಕ್ಕೇರಿಸಿದ ಸಿದ್ದಾಂತಕ್ಕೆ ನಿಷ್ಟೆಯಿಂದಿರಬೇಕೆಂದರು. ತಮ್ಮ ಹೇಳಿಕೆಗಾಗಿ ಶಾಸಕರು ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ, ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ಸಮ ಸಮಾಜ ಸಂಘಟನೆಯ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿಯರ್ಸ್ ಸಂಘಟನೆಯ ಅಧ್ಯಕ್ಷ ಗಂಗರಾಜು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ ವಿ ಕೃಷ್ಣ, ಸಂವಿಧಾನ ಬಳಗದ ಅನಿಲ್ ಕಿರುಗಾವಲು ಮುಂತಾದವರು ಉಪಸ್ಥಿತರಿದ್ದರು.




