ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಒಂದೆಡೆ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನ ನಡೆಸುತ್ತಿದ್ದರೆ, ಕಾಂಗ್ರೆಸ್ ಪಕ್ಷವು ಜೆಡಿಎಸ್-ಬಿಜೆಪಿಗಳಿಂದ ನಾಯಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ.
ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಚಿಂತನೆ ನಡೆಸುತ್ತಿರುವ ನಾಯಕರ ಪಟ್ಟಿಯಲ್ಲಿ ಹಾಸನ ಮಾಜಿ ಶಾಸಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೆಸರು ದಟ್ಟವಾಗಿ ಕೇಳಿಬರುತ್ತಿದೆ. ಪ್ರೀತಂ ಗೌಡ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ಸ್ವತಃ ಪ್ರೀತಂ ಗೌಡ ಅವರ ಆಪ್ತರೊಬ್ಬರು ಹಂಚಿಕೊಂಡಿದ್ದಾರೆನ್ನಲಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಾದಾಗಿನಿಂದಲೂ ಪ್ರೀತಂ ಗೌಡ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಕಾಂಗ್ರೆಸ್ ಸೇರಲು ಪ್ರೀತಂ ಗೌಡ ಮುಂದಾಗಿದ್ದಾರೆ. ಈ ಮಾಹಿತಿಗೆ ಪೂರಕವೆಂಬಂತೆ ಪಕ್ಷದಿಂದ ಈಗಾಗಲೇ ಪ್ರೀತಂ ಗೌಡ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾರೆ. ಇತ್ತೀಚೆಗೆ ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲೂ ಪ್ರೀತಂ ಗೌಡ ಭಾಗಿಯಾಗುತ್ತಿಲ್ಲ. ಆದ್ದರಿಂದ ಸದ್ಯದಲ್ಲೇ ಪ್ರೀತಂ ಗೌಡ ಕಾಂಗ್ರೆಸ್ ಸೇರಲಿದ್ಧಾರೆ ಎನ್ನಲಾಗಿದೆ.




