ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಲು ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮದ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ನಡೆದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ.ನಮ್ಮ ಸರ್ಕಾರ ರಚನೆಯಾದ ಒಂದೂವರೆ ವರ್ಷದಲ್ಲಿ ಬಸರಾಳು, ಕೆರಗೋಡು ಹೋಬಳಿ ಮಟ್ಟದಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು, ಶೇ. 90ರಷ್ಟು ಜನರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಕಾನೂನು ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಕಾಲಾವಕಾಶ ಬೇಕಿರುವುದರಿಂದ ಆ ಸಮಸ್ಯೆಗಳೂ ಕೂಎ ನಿಧಾನವಾಗಿ ಬಗೆಹರಿಯಲಿದೆ ಎಂದರು.
ಈಗಾಗಲೇ ಮಂಡ್ಯ ನಗರದ 14 ವಾರ್ಡ್ ಗಳಲ್ಲಿ ಜನತಾದರ್ಶನ ಮಾಡಿ ಮುಗಿಸಿದ್ದೇವೆ.ಈಗ ಮೂರನೇ ಜನತಾ ದರ್ಶನ ಕಾರ್ಯಕ್ರಮವನ್ನು ಹಳೆ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದೇವೆ. ಮುಂದಿನ 15-20 ದಿನಗಳ ಒಳಗೆ ಈ ಭಾಗದ ಎಲ್ಲರಿಗೂ ಇ-ಸ್ವತ್ತು ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಗ್ರಾಮೀಣ ಜನರು ಕಂದಾಯ ಇಲಾಖೆ,ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಕಚೇರಿಗಳಿಗೆ ಅಲೆಯಬಾರದು ಎಂಬ ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.ಇಂದು ಸುಮಾರು 53 ಇಲಾಖೆಗಳ ಅಧಿಕಾರಿಗಳು ಬಂದು ನಿಮ್ಮ ಸಮಸ್ಯೆಯನ್ನು ಆಲಿಸಿ ಪರಿಹರಿಸಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ಐದು ಯೋಜನೆಗಳಾದ ಗೃಹಲಕ್ಷ್ಮಿ,ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆ ಸಿಗದಿದ್ದರೆ,ಅಂತಹವರ ಸಮಸ್ಯೆಯನ್ನು ಬಗೆಹರಿಸಲಾಗುವುದು.ಜನತಾ ದರ್ಶನ ಕಾರ್ಯಕ್ರಮದಲ್ಲಿ ಮೈಸೂರಿನ ಆಸ್ಪತ್ರೆ ಸಿಬ್ಬಂದಿಗಳಿದ್ದು,ಕಣ್ಣಿನ ಪರೀಕ್ಷೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಜನರಿಗೆ ಚಿಕಿತ್ಸೆ ಕೊಡಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಶಿವಮೂರ್ತಿ,ಅಪರ ಪೋಲಿಸ್ ವರಿಷ್ಟಾಧಿಕಾರ ತಿಮ್ಮಯ್ಯ, ತಹಶೀಲ್ದಾರ್ ಶಿವಕುಮಾರ ಬಿರಾದಾರ, ಮನಮುಲ್ ನಿರ್ದೇಶಕ ಯು.ಸಿ. ಶಿವಕುಮಾರ್, ಜಿ.ಪಂ. ಮಾಜಿ ಸದಸ್ಯರಾದ ಬಿ.ಸಿ. ಶಿವಾನಂದ, ಹೆಚ್.ಎನ್. ಯೋಗೇಶ್, ಬೂದನೂರು ಗ್ರಾ.ಪಂ. ಅಧ್ಯಕ್ಷೆ ಮಾನಸ ಮತ್ತಿತರರಿದ್ದರು.




