ಆರ್ ಎಸ್ ಎಸ್ ತ್ರಿವರ್ಣ ಧ್ವಜ ಒಪ್ಪುವುದಿಲ್ಲ. ಅದು ದೇಶದ ಅಶುಭ ಎಂದು ಆರ್ ಎಸ್ ಎಸ್ ಮುಖವಾಣಿ ಆರ್ಗನೈಸರ್ ನಲ್ಲಿ ಹೇಳಲಾಗಿದೆ. ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿ, ಆರೆಸ್ಸೆಸ್ ನ ಗುಪ್ತ ಕಾರ್ಯಸೂಚಿಯಾಗಿದೆ, ಇವರು ಭಾರತ ದೇಶದ ತಾಲಿಬಾನ್ ಗಳು ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಸ್ವಾತಂತ್ರ್ಯ 2014 ರಲ್ಲಿ ಸಿಕ್ಕಿದೆ ಮತ್ತು ರಾಮಮಂದಿರ ನಿರ್ಮಾಣ ಆದ ಮೇಲೆ ಸಿಕ್ಕಿದೆ ಎಂದು ಹೇಳುವವರು ತಾಲೀಬಾನ್ ಸಂತತಿಗಳು. ಅಂಬೇಡ್ಕರ್ ದ್ವೇಷಿಗಳು ಸಂಘಪರಿವಾರದವರು. ಮೋಹನ್ ಭಾಗವತ್ ಯಾರು? ಯಾವ ಸಾಂವಿಧಾನಿಕ ಪದವಿಯಲ್ಲಿದಾರೆ? ಆರ್ ಎಸ್ ಎಸ್ ರಿಜಿಸ್ಟರ್ ಸಂಘಟನೆ ಆಲ್ಲ. ಕೋಟ್ಯಂತರ ಹಣ ಬೇರೆ ಬೇರೆ ಮೂಲಗಳಿಂದ ಖರ್ಚು ಮಾಡುತ್ತಿದ್ದಾರೆ? ಅದು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಮೋಹನ್ ಭಾಗವತ್ ಅವರಿಗೆ ಏಕೆ ಝೆಡ್ ಶ್ರೇಣಿಯ ಭದ್ರತೆ ಕೊಡಲಾಗಿದೆ. ನಾವು ತೆರಿಗೆ ಕಟ್ಟುವ ಹಣವನ್ನು ಬಳಸಿಕೊಂಡು ಅವರಿಗೆ ಭದ್ರತೆ ಕೊಡಲಾಗಿದೆ. ಅವರನ್ನು ಕೂಡಲೇ ವಾಪಸ್ ಪಡೆದುಕೊಳ್ಳಿ ಎಂದು ಒತ್ತಾಯಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಆಂತರಿಕ ಭಿನ್ನಮತದ ಬಗ್ಗೆ ಮಾತನಾಡಿದ ಅವರು, ಉದಪುರದ ಕಾರ್ಯಕಾರಿಣಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಮೊನ್ನೆ ಬೆಳಗಾವಿಯಲ್ಲಿಯೂ ಅದೇ ಚರ್ಚೆ ಆಗಿದೆ. ಉದಯಪುರದ ನಿರ್ಣಯ ಇಟ್ಟುಕೊಂಡು ಕೆಲವರು ಮಾತಾಡ್ತಾರೆ. ಆದರೆ ಎಲ್ಲವೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಬೇಕು ಎಂದರು.




