ಹೆಚ್ಚುವರಿ ಬಡ್ಡಿ ಕೊಡುವುದಾಗಿ ಹೇಳಿ ಹಣ ವಂಚಿಸಿದ್ದಾರೆಂದು ಆರೋಪದ ಮೇಲೆ ಐಶ್ವರ್ಯಾಗೌಡ ವಿರುದ್ಧ ಮಂಡ್ಯದಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಮಂಡ್ಯನಗರದ ಚಾಮುಂಡೇಶ್ವರಿನಗರದ ನಿವಾಸಿ ಸೌಭಾಗ್ಯ ಎಂಬುವರು ಪಶ್ಚಿಮ ಪೊಲೀಸ್ ಠಾಣೆಗೆ ಜ.20ರಂದು ದೂರು ನೀಡಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ಚೀಟಿ ವ್ಯವಹಾರ ಮಾಡುವುದಾಗಿ ಹೇಳಿ 2017ರ ಜನವರಿಯಿಂದ ಜೂನ್ ಅವಧಿಯಲ್ಲಿ 33 ಲಕ್ಷ ರೂ ಹಾಗೂ 366 ಗ್ರಾಂ ಚಿನ್ನದ ಒಡವೆಗಳನ್ನು ಐಶ್ವರ್ಯ ಗೌಡ ಹಾಗೂ ಆಕೆಯ ಕಡೆಯವರು ಪಡೆದುಕೊಂಡು ವಂಚಿಸಿದ್ದಾರೆಂದು ತಿಳಿಸಿದ್ದಾರೆ.

ತನ್ನ ಗಂಡನ ನಿವೃತ್ತಿ ಹಾಗೂ ಉಳಿತಾಯದ ಹಣವನ್ನು ನೀಡಲಾಗಿದೆ. ಒಂದು ಲಕ್ಷ ರೂ.ಗೆ ಶೇ.10 ಪರ್ಸೆಂಟ್ ಬಡ್ಡಿ ಕೊಡುವಂತೆ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ನವ್ಯಶ್ರೀ ಅಲಿಯಾಸ್ ಐಶ್ವರ್ಯಾಗೌಡ, ಈಕೆಯ ಪತಿ ಹರೀಶ್, ಸಹೋದರ ಮಂಜುನಾಥ್ ಹಾಗೂ ಯಶವಂತ್ ಎಂಬುವರ ವಿರುದ್ಧ ದೂರು ನೀಡಲಾಗಿದೆ. ಇದಕ್ಕೂ ಮೊದಲು ಐಶ್ವರ್ಯಾಗೌಡ ವಿರುದ್ಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ.




