ಸ್ವಾತಂತ್ರ್ಯ ಪೂರ್ವದಲ್ಲಿಯೇ ಹೆಣ್ಣು ಮಕ್ಕಳು ಮತ್ತು ಹಿಂದುಳಿದ ಶೋಷಿತರಿಗೆ ಅಕ್ಷರ ಜ್ಞಾನ ನೀಡಲು ಶ್ರಮಿಸಿದ ಅಕ್ಷರದಾತರಾದ ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿಫುಲೆ ಮತ್ತು ಪಾತೀಮಾ ಶೇಖ್ ಅವರನ್ನು ಇಂದಿನ ಮಕ್ಕಳು ಸ್ಮರಿಸುವುದು ಅತ್ಯಗತ್ಯ ಎಂದು ಮಹಿಳಾ ಮುನ್ನಡೆ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಹೇಳಿದರು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಮಂಡ್ಯನಗರದ ಮರಕಾಡದೊಡ್ಡಿ ಮತ್ತು ಶ್ರೀನಿವಾಸ ಪುರದ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನದ ವತಿಯಿಂದ ಹಮ್ಮಿಕೊಂಡಿದ್ದ ಅರಿವಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಭಾರತದ ಮೊದಲ ಮಹಿಳಾ ಶಿಕ್ಷಕಿಯರಾಗಿ ಜಾತಿ, ಧರ್ಮದ ಭೇದ ತೊರೆದು ದುಡಿದ ಈ ಇಬ್ಬರು ಅಕ್ಷರದ ಅವ್ವಂದಿರನ್ನು ನೆನಪು ಮಾಡಿಕೊಳ್ಳುವುದು ಇವತ್ತಿನ ಕಾಲಘಟ್ಟದಲ್ಲಿ ಬಹಳ ಮುಖ್ಯ. ಮನುವಾದಿಗಳಿಗೆ ಸವಾಲೆಸೆದು ಮಹಿಳಾ ಶಿಕ್ಷಣಕ್ಕಾಗಿ ಪಣ ತೊಟ್ಟು ಹಲವಾರು ಅಪಮಾನ ಮತ್ತು ಸವಾಲಿನ ಸನ್ನಿವೇಶಗಳನ್ನು ಎದುರಿಸಿ ಮುಟ್ಟಿಸಿಕೊಳ್ಳಲೆಬಾರದು ಎಂಬ ಕಟ್ಟುಪಾಡುಗಳನ್ನು ಮೀರಿ ಸಮಾನತೆಯ ಆಶಯವನ್ನು ಬಿತ್ತುವ ಕಾಯಕಕ್ಕೆ ತಳಪಾಯ ಹಾಕಿದ ಮಹನೀಯರನ್ನು ನಾವು ಸದಾಕಾಲವೂ ಸ್ಮರಿಸಬೇಕು ಎಂದರು.

ಇವತ್ತಿನ ಪ್ರಸ್ತುತ ಸಮಾಜದಲ್ಲಿ ಜಾತಿ ಧರ್ಮದ ಆಧಾರದಲ್ಲಿ ಮನುಷ್ಯ ಮನುಷ್ಯರ ನಡುವೆ ಅಡ್ಡಗೋಡೆಗಳನ್ನು ಸೃಷ್ಠಿ ಮಾಡಿ ವಿಷ ಬೀಜ ಬಿತ್ತುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಅವತ್ತಿಗೆ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ದಂಪತಿಗಳು ಎಲ್ಲಾ ವರ್ಗದ ಮಕ್ಕಳಿಗಾಗಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ತೆರೆದಾಗ ಇದೇ ಮನುವಾದಿಗಳು ವಿರೋಧ ಮಾಡಿದರು. ಜ್ಯೋತಿ ಬಾ ಮತ್ತು ಸಾವಿತ್ರಿ ರವರ ಕೆಲಸವನ್ನು ವಿರೋಧಿಸಿ ಊರಿನಿಂದ ಅವರ ಕುಟುಂಬವನ್ನು ಬಹಿಸ್ಕರಿಸುವ ಬೆದರಿಕೆ ಹಾಕಿದಾಗ, ಆ ದಂಪತಿಗಳಿಬ್ಬರು ಕುಟುಂಬ ತೊರೆದು ಮನೆ ಬಿಟ್ಟು ಬರಬೇಕಾಯಿತು. ಆಗ ನೆರವಾದವರೆ ಜ್ಯೋತಿ ಬಾ ರವರ ಸ್ನೇಹಿತ ಮಿಯಾನ್ ಉಸ್ಮಾನ್ ಶೇಖ್ ಮತ್ತು ಅವರ ತಂಗಿ ಪಾತೀಮಾ ಶೇಖ್, ಅವರು ಜ್ಯೋತಿ ಬಾ ದಂಪತಿಗಳಿಗೆ ಆಶ್ರಯ ನೀಡಿ ಅವರ ಶಿಕ್ಷಣದ ಕಾಂತ್ರಿಯ ಕೆಲಸಕ್ಕೆ ಕೈ ಜೋಡಿಸಿ ನಿಂತರು ಎಂದು ಸ್ಮರಿಸಿದರು.
ಅವತ್ತಿಗೆ ಇವರ್ಯಾರಿಗೂ ಜಾತಿಯಾಗಲಿ, ಧರ್ಮವಾಗಲಿ ಶಿಕ್ಷಣದ ಕ್ರಾಂತಿಗೆ ಅಡ್ಡಿ ಉಂಟು ಮಾಡಲಿಲ್ಲ. ಮಹಿಳೆಯರನ್ನು ಸತಿಸಹಗಮನ, ಬಾಲ್ಯವಿವಾಹ, ವಿಧವಾ ಪದ್ದತಿಯಂತಹ ಅನಿಷ್ಟ ಪದ್ದತಿಗಳು ಶೋಷಣೆಗೆ ಒಳಪಡಿಸುತ್ತಿದ್ದ ಸಂದರ್ಭದಲ್ಲಿ, ಅಂತಹ ಅನಿಷ್ಟ ಪದ್ದತಿಗಳನ್ನು ತೊಲಗಿಸಲು ಧ್ವನಿಯೆತ್ತಿ, ಅನಿಷ್ಟ ಪದ್ದತಿಗಳ ನಿರ್ಮೂಲನೆ ಮತ್ತು ಹೆಣ್ಣುಮಕ್ಕಳ ಮೇಲಿನ ಶೋಷಣೆಯನ್ನು ನಿರ್ಮೂಲನೆ ಮಾಡಬೇಕೆಂದು ನಿಂತ ಹೆಗ್ಗಳಿಕೆ ಸಾವಿತ್ರಿ ಫುಲೆ ದಂಪತಿಗಳಿಗೆ ಸೇರಬೇಕಾದ್ದು, ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ. ಇವರ ವಿಚಾರಧಾರೆಯನ್ನು ಮೈಗೂಡಿಸಿಕೊಂಡರು, ಇಷ್ಟೆಲ್ಲ ಮಹಾನ್ ತ್ಯಾಗದ ಫಲವಾಗಿ ಶಿಕ್ಷಣ ಪಡೆದ ಇವತ್ತಿನ ಯುವ ಪೀಳಿಗೆ ಮತ್ತು ಮಕ್ಕಳು ಈ ಜಾತಿ ಧರ್ಮ ವನ್ನು ಮೀರಿ ವಿಶ್ವ ಮಾನವತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇವತ್ತು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೂ ಆಗಿರುವುದರಿಂದ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನಿಲ್ಲಬೇಕು. ಮಕ್ಕಳಿಗೂ ಒಳ್ಳೆಯ ಸ್ಪರ್ಶ ಕೆಟ್ಟ ಸ್ಪರ್ಶದ ಬಗ್ಗೆ ಅರಿವಿರಬೇಕು. ಮೊಬೈಲ್ ಬಳಕೆಯಲ್ಲಿ ಎಚ್ಚರವಹಿಸಬೇಕು ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು.ಇವತ್ತು ಚಿಕ್ಕ ಹುಡುಗರು ಕೂಡ ಲೈಂಗಿಕ ಕಿರುಕುಳದ ಅಪರಾಧ ಹೊತ್ತು, ಬಾಲ ಅಪರಾಧಿಗಳಾಗಿ ಜೈಲು ಸೇರುತ್ತಿರುವ ಸಂಧರ್ಭದಲ್ಲಿ ಮಕ್ಕಳಿಗೆ ಸರಿ ತಪ್ಪಿನ ತಿಳಿವಳಿಕೆಯೂ ಕೂಡ ಬಹಳ ಅಗತ್ಯ ಎಂದು ಹೇಳುತ್ತ POSCO ಕಾಯ್ದೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಮಕ್ಕಳು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳಾ ಮುನ್ನಡೆ ಶಿಲ್ಪ ರವರು ಲೈಂಗಿಕ ಅಪರಾಧದ ಬಗ್ಗೆ ಅರಿವು ಮೂಡಿಸುವ ಕಿರು ನಾಟಕವನ್ನು ಪ್ರಸ್ತುತಪಡಿಸಿದರು.
ಮುಖ್ಯ ಶಿಕ್ಷಕರಾದ ಕೆ.ಬಿ.ಆಶಾರಾಣಿ ಕಾರ್ಯಕ್ರಮದ ಸ್ವರೂಪದ ಕುರಿತು ಮಾತನಾಡಿ, ಇವತ್ತಿನ ಅರಿವಿನ ಕಾರ್ಯಕ್ರಮದ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಮತ್ತು ಶಿಕ್ಷಣ ಮತ್ತು ಕಲಿಕೆಗೆಯ ಕಡೆಗೆ ಗಮನ ಹರಿಸಿ, ಶ್ರಮ ಹಾಕಿ ಉಜ್ವಲ ಭವಿಷ್ಯ ರೂಪಿಸಿಕೊಂಡು ಉತ್ತಮ ಪ್ರಜೆಗಳಾಗಿ ಎಂಬ ಸಂದೇಶ ಕೊಟ್ಟರು, ಮಕ್ಕಳೂ ಕೂಡಾ ಬಹಳ ಉತ್ತಮವಾಗಿ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ ಲತಾಶಂಕರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀನಿವಾಸ ಪುರದ ಸಹ ಶಿಕ್ಷಕರಾದ ಇಂದಿರಾ ಎಸ್, ಸೌಭಾಗ್ಯ ಎಸ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮರಕಾಡದೊಡ್ಡಿಯ ಮುಖ್ಯ ಶಿಕ್ಷಕ ಮಹೇಂದ್ರ ಕೆ.ಬಿ.ಹಾಗೂ ಜಿ.ಕೆ ಲೋಕೇಶ್ ಉಪಸ್ಥಿತರಿದ್ದರು.




