ಕೇಂದ್ರ ಸರ್ಕಾರ ನಬಾರ್ಡ್ ಗೆ ನೀಡುತ್ತಿದ್ದ ಸಾಲದ ಮೊತ್ತ ಕಡಿತಗೊಳಿರುವುದನ್ನು ವಿರೋಧಿಸಿ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜನವರಿ 29ರ ಬೆಳಿಗ್ಗೆ 11ಗಂಟೆಗೆ ಬೆಂಗಳೂರಿನ ರಿಸರ್ವ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ ಮೂರು ವರ್ಷದಿಂದ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಲೇ ಬಂದಿದ್ದು, ಕಳೆದ ವರ್ಷ ರಾಜ್ಯಕ್ಕೆ 5600 ಕೋಟಿ ನೀಡಲಾಗಿದ್ದ ಸಾಲ ಪ್ರಸಕ್ತ ವರ್ಷಕ್ಕೆ 2340ಕ್ಕೆ ಇಳಿಸಿದೆ ಎಂದು ಆರೋಪಿಸಿದರು.
ರಾಜ್ಯಕ್ಕೆ ನೀಡುವ ಸಾಲದ ಮೊತ್ತವನ್ನು ಶೇ.58ರಷ್ಟು ತಗ್ಗಿಸುವ ಮೂಲಕ ರಾಜ್ಯದ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಿದೆ. ರೈತರು ಹೆಚ್ಚು ಬಡ್ಡಿ ತೆತ್ತು ವಾಣಿಜ್ಯ ಬ್ಯಾಂಕುಗಳ ಮೊರೆ ಹೋಗಿ, ಖಾಸಗಿ ಸಾಲದ ಸುಳಿಗೆ ಸಿಲುಕೊಂಡು ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ. ಇದರಿಂದ ಸಂಪೂರ್ಣ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡಲು ಹುನ್ನಾರ ನಡೆಸುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಿದ್ದು, ಅವರ ಕಿರುಕುಳದಿಂದ ಗ್ರಾಮೀನ ಪ್ರದೇಶದ ಮಹಿಳೆಯರು ಹಾಗೂ ಇತರೆ ದುಡಿಯುವ ವರ್ಗ ಸಂಕಷ್ಟಕ್ಕೀಡಾಗಿದ್ದಾರೆ. ಇತ್ತೀಚೆಗೆ ರಾಮನಗರದಲ್ಲಿಯೂ ಮಹಿಳೆ ಆತ್ಮಹತ್ಯೆಗೆ ಶರಣಾದ ಪ್ರಕರಣ ನಡೆದಿದ್ದು, ಇದಕ್ಕೆ ಕೇಂದ್ರ ಸರ್ಕಾರದ ನಡೆಯೇ ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ರೈತರು, ಸ್ವ ಸಹಾಯ ಸಂಘಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳು ಭಾಗವಹಿಸುವಂತೆ ಕರೆ ನೀಡಿದರು.
ಗೋಷ್ಠಿಯಲ್ಲಿ ಬೋರಾಪುರ ಶಂಕರೇಗೌಡ, ಲಿಂಗಪ್ಪಾಜಿ, ಅಣ್ಣಯ್ಯ, ವಿ.ಸಿ.ಉಮೇಶ್, ವಿಜಯ್ ಕುಮಾರ್, ಮಂಜು ಇತರರಿದ್ದರು.




