Friday, November 20, 2026

ಪ್ರಾಯೋಗಿಕ ಆವೃತ್ತಿ

ಮತದಾನ ಒಂದು ಸಾರ್ವಭೌಮ ಅಧಿಕಾರ: ನ್ಯಾ. ಆನಂದ್

ಇತ್ತೀಚಿನ ದಿನಗಳಲ್ಲಿ ವೃದ್ಧರೂ ಮತದಾನದಲ್ಲಿ ತೋರಿಸುತ್ತಿರುವ ಉತ್ಸಾಹ ಯುವ ಜನತೆಯಲ್ಲಿ ಕಾಣುತ್ತಿಲ್ಲ, ಮತದಾನ ಒಂದು ಸಾರ್ವಭೌಮ ಅಧಿಕಾರ ಅದನ್ನು ಚಲಾಯಿಸಿದಾಗ ಮಾತ್ರ ಸಮಾಜದಲ್ಲಿ ಆಗುವ ತಪ್ಪನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ ಎಂದು ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಆನಂದ್ ಅಭಿಪ್ರಾಯಪಟ್ಟರು.

ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, 18 ವರ್ಷ ತುಂಬಿದ ಯುವ ಸಮುಹವನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಹಾಗೂ ಅವರಿಗೆ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತದಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಶೇ 65-70 ರಷ್ಟು ಮಾತ್ರ ಮತ ಚಲಾವಣೆ ಆಗುತ್ತಿದೆ, ದೇಶದಲ್ಲಿ ಶೇ 100ಕ್ಕೆ ನೂರರಷ್ಟು ಮತ ಚಲಾವಣೆ ಆಗದಿರುವುದು ವಿಪರ್ಯಾಸ. ದೇಶದ ಯುವ ಜನತೆಯ ಇಚ್ಛಾಶಕ್ತಿ ಇದ್ದರೆ ಮಾತ್ರ ಮತದಾನದ ಪ್ರಮಾಣವನ್ನು ಶೇ 100% ಹೆಚ್ಚಿಸಬಹುದು ಹಾಗೂ ಮತದಾನ ಕುರಿತು ಜಾಗೃತಿ ಮೂಡಿಸುವ ಕೆಲಸ ಹೆಚ್ಚಾಗಬೇಕಿದೆ ಎಂದರು.

ಮಂಡ್ಯ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಕಾನೂನು ವ್ಯವಸ್ಥೆ ಇಲ್ಲದಿದ್ದರೆ ಅಲ್ಲಿ, ಬಲ ಇರುವವರು ಬಲಹೀನರ ಮೇಲೆ ಅಧಿಪತ್ಯ ಸ್ಥಾಪಿಸುತ್ತಾರೆ, ಆದರೆ ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕೊಟ್ಟು ಎಲ್ಲರಿಗೂ ಬಲ ನೀಡಿದೆ. ಮತದಾನ ಮಾಡಿ ಉತ್ತಮ ಸಮಾಜ ನಿರ್ಮಾಣ ಮಾಡಿ ಎಂದು ಹೇಳಿದರು.

9 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ದಿನಾಚರಣೆ

ದೇಶದಲ್ಲಿ 9 ಲಕ್ಷಕ್ಕೂ ಮತಗಟ್ಟೆಗಳಿವೆ ಎಲ್ಲಾ ಮತಗಟ್ಟೆಗಳಲ್ಲೂ ಮತದಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ, ವಿಶ್ವದಲ್ಲೇ ಅತಿ ಹೆಚ್ಚು ವ್ಯವಸ್ಥಿತವಾಗಿ ಚುನಾವಣೆ ನಡೆಯುವುದು ಭಾರತದಲ್ಲೇ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಹೇಳಿದರು.

ಉತ್ತಮ ನಾಯಕರನ್ನು ಆರಿಸುವಲ್ಲಿ ನಾಗರೀಕರು ಯಶಸ್ವಿಯಾದರೆ ಉತ್ತಮ ದೇಶ ನಿರ್ಮಾಣಕ್ಕೆ ಬೂನಾದಿ ಹಾಕಿದಂತೆ, ಯುವ ಜನತೆ ಎಚ್ಚೆತ್ತುಕೊಳ್ಳಬೇಕು,ಮತದಾನ ಮಹತ್ವ ತಿಳಿಸುವ ಕುರಿತು ಯುವ ಜನತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮತದಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ವಿವಿಧ ಶೈಲಿಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ ಇರುವ ಭಾರತದಲ್ಲಿ ಎಲ್ಲಾರನ್ನು ಪರಿಗಣಿಸಿ ಒಟ್ಟಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣ ಮಾಡಲು ಮತದಾನದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್ ನಗರಸಭೆ ಆಯುಕ್ತೆ ಪಂಪಶ್ರೀ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ