ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಶಕ್ತಿಸೌಧ ಪಶ್ಚಿಮ ದ್ವಾರದಲ್ಲಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ಕನ್ನಡಾಂಬೆ ಭುವನೇಶ್ವರಿ ತಾಯಿಯ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಯಿತು. ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ ಹಾಗೂ ಉಸಿರಾಗಲಿ’ ಕನ್ನಡ ಎಂಬ ಶೀರ್ಷಿಕೆಯಡಿ ವರ್ಷವಿಡೀ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಹೊಯ್ಸಳ ಶೈಲೀಯ ಪೀಠ ನಿರ್ಮಾಣ
ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ ಕದಂಬ ಹಾಗೂ ಆಧುನೀಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ವೈಜಯಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇದೆ.
ಪ್ರತಿಮೆಯ ಸುತ್ತಲೂ ಉದ್ಯಾನವನ, ಆವರಣದ ಸುತ್ತಲೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮದ ದ್ವಾರಕ್ಕೆ ಇರುವ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆಂದೇ ಪಶ್ಚಿಮಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಇರಲಿದೆ.
ಪ್ರತಿಮೆಯ ವೈಶಿಷ್ಟ್ಯತೆ
ನೆಲಮಟ್ಟದಿಂದ ಪ್ರತಿಮೆಯ ಎತ್ತರ – 43 ಅಡಿ 6 ಇಂಚು
ಪ್ರತಿಮೆಯ ಲೋಹದ ಒಟ್ಟು ತೂಕ – 31.50 ಟನ್
ಭುವನೇಶ್ವರಿ ಪ್ರತಿಮೆ – 20 ಟನ್
ಕರ್ನಾಟಕ ನಕ್ಷೆ – 11.50 ಟನ್
ಭುವನೇಶ್ವರಿ ಪ್ರತಿಮೆಯ ಒಟ್ಟು ವಿಸ್ತೀರ್ಣ (ಉದ್ಯಾನವನ ಸೇರಿದಂತೆ) – 4500 ಚ.ಮೀ
ಕಲ್ಲು ಕಟ್ಟಡದ ಪೀಠದ ವಿವರ – ಕಲ್ಲಿನ ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಣ ಪಥದ ಸುತ್ತ ಕರ್ಣಕೂಟ ಮತ್ತು ಅಲಂಕಾರಿಕ ಕಲ್ಲಿನ ಕೈಪಿಡಿ ನಿರ್ಮಿಸಲಾಗಿದೆ.
ಕಾಮಗಾರಿಯ ಅಂದಾಜು ವೆಚ್ಚ : 21.24 ಕೋಟಿ
ಕಾಮಗಾರಿ ನಿರ್ವಹಣೆ: ಲೋಕೋಪಯೋಗಿ ಇಲಾಖೆ
ಪ್ರತಿಮೆ ಅನಾವರಣದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ 4 ದಿಕ್ಕುಗಳಿಂದ ಮೆರವಣಿಗೆ ಆಗಮಿಸಿವು. ಜ್ಞಾನಪೀಠ ಪುರಸ್ಕೃತರು ಹಾಗೂ ನಾಡಿನ ಹೆಸರಾಂತ ಮಹನೀಯರ ಫೋಟೋಗಳನ್ನು ಇಡಲಾದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿತು. ಪೂರ್ವ ದಿಕ್ಕಿನಿಂದ (ಇಂದಿರಾ ನಗರ ): ಪಂಪ, ರನ್ನ, ಪೊನ್ನ, ಜನ್ನ, ಸರ್.ಎಂ. ವಿಶ್ವೇಶ್ವರಯ್ಯ, ಸರ್ ಸಿ.ವಿ. ರಾಮನ್, ಸಿ.ಎನ್.ಆರ್. ರಾವ್, ಭೀಮ್ಸೇನ್ ಜೋಷಿ, ಡಾ. ರಾಜ್ಕುಮಾರ್, ಎಸ್. ನಿಜಲಿಂಗಪ್ಪ, ಶ್ರೀ ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡ, ಡಾ. ವಿರೇಂದ್ರ ಹೆಗಡೆ, ಡಾ. ಪುನೀತ್ ರಾಜ್ಕುಮಾರ್ ಅವರ ಫೋಟೋ ಇರುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿ ಬಂದವು.
ಪಶ್ಚಿಮ ದಿಕ್ಕು: (ಕೆಂಗೇರಿ ಉಪನಗರ ): ಜ್ಞಾನಪೀಠ ಪ್ರಶಸ್ತಿ ಪುರಸ್ಕತರು ಹಾಗೂ ರಾಷ್ಟ್ರಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಾಂಗಾರ್, ವಿ.ಕೃ. ಗೋಕಾಕ್, ಡಾ. ಯು. ಆರ್. ಅನಂತ ಮೂರ್ತಿ, ಡಾ. ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ, ಮಂಜೇಶ್ವರ ಗೋವಿಂದ ಪೈ, ಡಾ. ಜಿ.ಎಸ್. ಶಿವರುದ್ರಪ್ಪ ಅವರ ಫೋಟೋ ಮೆರವಣಿಗೆಯಲ್ಲಿ ಬಂದಿತು.
ಉತ್ತರ ದಿಕ್ಕು : (ಹೆಬ್ಬಾಳ) ಈ ದಿಕ್ಕಿನಿಂದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು, ಗಂಗರು, ಮೈಸೂರು ರಾಜ್ಯರ ಲಾಂಛನ ಹಾಗೂ ಹಲ್ಮಿಡಿ ಶಾಸನದ ಪ್ರತಿರೂಪವಿತ್ತು.
ದಕ್ಷಿಣ ದಿಕ್ಕು : (ಬಸವನಗುಡಿ ಬುಲ್ ಟೆಂಪಲ್ ) ಇನ್ನು ದಕ್ಷಿಣ ದಿಕ್ಕಿನಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ, ಕನಕದಾಸರು, ಪುರಂದರದಾಸರು, ಸಂಚಿ ಹೊನ್ನಮ್ಮ, ದಾನ ಚಿಂತಾಮಣಿ ಅತ್ತಿಮಬ್ಬೆ, ಅಕ್ಕಮಹಾದೇವಿ, ಕುಮಾರವ್ಯಾಸ, ಸಂತ ಶಿಶುನಾಳ ಷರೀಫ, ರೆವರೆಂಡ್ ಎಫ್ ಕಿಟ್ಟೆಲ್, ಬಿ.ಎಲ್. ರೈಸ್ ಅವರ ಪಲ್ಲಕ್ಕಿ ಬರಲಿದ್ದು, ನಾಲ್ಕು ದಿಕ್ಕುಗಳಿನಿಂದ ಮೆರವಣಿಗೆ ಸಾಗಿ ಅಂತಿಮವಾಗಿ ನಾಡದೇವಿ ಭುವನೇಶ್ವರಿ ಪ್ರತಿಮೆ ಇರುವ ವಿಧಾನಸೌಧದ ಬಳಿ ತಲುಪಿತು.
ನಾಡದೇವಿ ಭುವನೇಶ್ವರಿ ಪ್ರತಿಮೆ ಅನಾವರಣದ ಬಳಿಕ ಕನ್ನಡ ಗೀತೆಗಳ ಕಾರ್ಯಕ್ರಮ ಮತ್ತು ಹೊನ್ನ ಬಿತ್ತೇವು – ನೃತ್ಯ ರೂಪಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.




