ಜನತಾ ಶಿಕ್ಷಣ ಸಂಸ್ಥೆ ಕಟ್ಟಿದ್ದು ರೈತರು ಮತ್ತು ಕಲಾವಿದರು. ಕಲೆ ಮತ್ತು ಸಂಸ್ಕೃತಿಯಿಂದ ಕಟ್ಟಿರುವ ಸಂಸ್ಥೆಯೇ ಜನತಾ ಶಿಕ್ಷಣ ಸಂಸ್ಥೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯದ ಪಿಇಟಿ ಕ್ರೀಡಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಮಂಡ್ಯ, ಡ್ರೀಮ್ ಕ್ರಿಕೆಟ್ ಅಕಾಡೆಮಿ ಇವರ ಸಂಯುಕ್ತ ಅಶ್ರಯದಲ್ಲಿ ಪಿಇಟಿ ಸಂಸ್ಥೆಯ ಸಂಸ್ಥಾಪಕರಾದ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಸ್ಮರಣಾರ್ಥ ಟಿ-20 ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್- 1, ಕೆವಿಎಸ್ ಕಪ್ 2025 ರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಡ್ಯದ ಪಿಇಎಸ್ ಶಿಕ್ಷಣ ಸಂಸ್ಥೆಗೆ ಸುಮಾರು 69 ಎಕರೆ ಜಮೀನನ್ನು ರೈತರು ನೀಡಿದ್ದಾರೆ.ಇದು ರೈತರಿಂದ ಆಗಿರುವ ಸಂಸ್ಥೆ. ಕಲಾವಿದರು ನಾಟಕ ಆಡಿ ಚಂದಾ ಎತ್ತಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಜನತಾ ಶಿಕ್ಷಣ ಸಂಸ್ಥೆ ಕಲೆ ಮತ್ತು ಸಂಸ್ಕೃತಿಯಿಂದ ಕಟ್ಟಿರುವ ಸಂಸ್ಥೆಯಾಗಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಇಂದಿನ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಗೆ ಹಲವು ಚಲನಚಿತ್ರ ಕಲಾವಿದರು ಬಂದಿದ್ದಾರೆ.ಅವರೆಲ್ಲ ಮಂಡ್ಯದ ನೆಲಕ್ಕೆ ಪಾದರ್ಪಣೆ ಮಾಡಿರುವುದು ಸಂತೋಷ ತಂದಿದೆ. ನಮ್ಮ ತಾತ ಕೆ.ವಿ. ಶಂಕರಗೌಡರು ಹಾಗೂ ತಂದೆ ಸಚ್ಚಿದಾನಂದ ಅವರು ಸಂಕ್ರಾಂತಿ, ಹೊಸನೀರು ಸೇರಿದಂತೆ ಆರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.ಆದರೆ ನನಗೆ ಸಿನಿಮಾ ಕ್ಷೇತ್ರ ಅಷ್ಟಾಗಿ ಆಗಿ ಬರಲಿಲ್ಲ. ನಮ್ಮ ಊರಿನಿಂದ ರವಿಶಂಕರ್ ಅವರು ಕಲಾವಿದರಾಗಿ ಚಿತ್ರರಂಗದಲ್ಲಿರುವುದು ಸಂತಸದ ಸಂಗತಿ ಎಂದರು.
ಪಿಇಟಿ ಅಧ್ಯಕ್ಷರಾಗಿದ್ದ ಹೆಚ್. ಡಿ.ಚೌಡಯ್ಯನವರು ಕ್ರೀಡಾ ಸಮುಚ್ಛಯ ನಿರ್ಮಾಣ ಮಾಡಿ, ಸ್ವಿಮ್ಮಿಂಗ್ ಪೂಲ್, ಟೇಬಲ್ ಟೆನಿಸ್, ಬ್ಯಾಸ್ಕೆಟ್ ಬಾಲ್, ಕ್ರಿಕೆಟ್ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಿದರು. ಈ ಕ್ರಿಕೆಟ್ ಕ್ರೀಡಾಂಗಣದ ಜೊತೆ ಕೆಎಸ್ ಸಿಎ ಜೊತೆ ಒಪ್ಪಂದ ಮಾಡಿಕೊಂಡಿದೆ.ಈಗಾಗಲೇ ಇಲ್ಲಿ ಕರ್ನಾಟಕ ಮತ್ತು ಮಹಾ ರಾಷ್ಟ್ರ ತಂಡಗಳ ನಡುವೆ ರಣಜಿ ಪಂದ್ಯ ಕೂಡ ನಡೆದಿದೆ. ಇಂದು ಟಿ-20 ಪಂದ್ಯಗಳು ನಡೆಯುತ್ತಿರುವುದು ಸಂತೋಷ ತಂದಿದೆ. ಎಲ್ಲಾ ಕ್ರಿಕೆಟ್ ಆಟಗಾರರು ಕ್ರೀಡಾ ಸ್ಪೂರ್ತಿಯಿಂದ ಆಟವಾಡಬೇಕು. ಮಂಡ್ಯದ ಮಣ್ಣು ಎಂದಿಗೂ ಕಲಾವಿದರ ಕೈ ಬಿಟ್ಟಿಲ್ಲ.ಈ ಪಂದ್ಯಾವಳಿಯಲ್ಲಿ ಕಲಾವಿದರು ಭಾಗವಹಿಸುತ್ತಿದ್ದು, ಎಲ್ಲರಿಗೂ ಶುಭ ಕೋರುತ್ತೇನೆ. ಈ ಕ್ರಿಕೆಟ್ ಪಂದ್ಯಾವಳಿ ನಡೆಯಲು ನಮ್ಮ ಸಂಸ್ಥೆಯ ಎಲ್ಲಾ ಟ್ರಸ್ಟಿಗಳು, ಕಲಾವಿದರು ಪ್ರೋತ್ಸಾಹ ನೀಡಿದ್ದು, ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನತಾ ಶಿಕ್ಷಣ ಟ್ರಸ್ಟ್ ಜಂಟಿ ಕಾರ್ಯದರ್ಶಿ ಕೆ.ಆರ್. ದಯಾನಂದ್, ನಿರ್ದೇಶಕ ಡಾ. ರಾಮಲಿಂಗಯ್ಯ, ಚಲನಚಿತ್ರ ನಟರುಗಳಾದ ಲೂಸ್ ಮಾದ ಯೋಗೇಶ್, ಕೆಜಿಎಫ್ ಗರುಡರಾಮ್, ರವಿಶಂಕರ್ ಗೌಡ, ವಿವಾನ್ ಸೇರಿದಂತೆ ಸಂಗೀತ ನಿರ್ದೇಶಕರುಗಳು ಹಾಗೂ ಪ್ರಾದೇಶಿಕ ಕ್ರಿಕೆಟ್ ಆಟಗಾರರು, ಕಾಲೇಜು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.




