Thursday, November 19, 2026

ಪ್ರಾಯೋಗಿಕ ಆವೃತ್ತಿ

100ನೇ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ ; ಕ್ಷಣಗಣನೆ ಆರಂಭ

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ಇಸ್ರೋ(ISRO) 100ನೇ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಆಂಧ್ರದ  ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ 100ನೇ ಉಪಗ್ರಹ ಉಡಾವಣೆಯ ಮೂಲಕ ಐತಿಹಾಸಿಕ ಹೆಜ್ಜೆಯನ್ನು ಇಡುತ್ತಿದೆ. ಜನವರಿ 29 ರಂದು ಉಪಗ್ರಹ ಉಡಾವಣೆ ನಡೆಯಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

100ನೇ ಉಪಗ್ರಹ 
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜನವರಿ 29 ರ ಬೆಳಗ್ಗೆ 6.23 ಕ್ಕೆ ಶ್ರೀಹರಿಕೋಟಾದಿಂದ 2,250 ಕೆಜಿ ನ್ಯಾವಿಗೇಷನ್ ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್‌15 ಮೂಲಕ ಕಳುಹಿಸಲು ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ. ಇದು ಜಿಎಸ್‌ಎಲ್‌ವಿ ಉಡಾವಣಾ ವಾಹನದ 17ನೇ ಹಾರಾಟವಾಗಲಿದ್ದು, ಕ್ರಯೋಜೆನಿಕ ಎಂಜಿನ್ ಬಳಸುತ್ತಿರುವ 11ನೇ ವಾಹನವಾಗಿದೆ. 19 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಯಲ್ಲಿ ಕೂರಿಸಲಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಮಟ್ಟಿಗೆ ಇದು ಮಹತ್ವದ ಮೈಲಿಗಲ್ಲು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋಗೆ ಇದು ಹೆಮ್ಮೆಯ ವಿಚಾರವಾಗಿದೆ.

ಜಿಎಸ್‌ಎಲ್‌ವಿ-ಎಫ್‌15 ಎನ್‌ವಿಎಸ್‌ 02
ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಜನವರಿ 29ಕ್ಕೆ ಜಿಎಸ್‌ಎಲ್‌ವಿ-ಎಫ್‌15 ಉಡಾವಣಾ ವಾಹನದ ಮೂಲಕ ಎನ್‌ವಿಎಸ್‌ 02 ಮಿಷನ್ ಅನ್ನು ಕಕ್ಷೆಗೆ ಸೇರಿಸಲಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದು, ಅಂತಿಮ ಹಂತದ ತಯಾರಿ ನಡೆದಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಈ ಸಂದರ್ಭಕ್ಕೆ ಅನುಗುಣವಾಗಿ ನೆನಪಿಸಿಕೊಳ್ಳುವುದಾದರೆ, ಎರಡನೇ ತಲೆಮಾರಿನ ಮೊದಲ ಉಪಗ್ರಹವಾದ NVS-01 ಅನ್ನು ಜಿಎಸ್‌ಎಲ್‌ವಿ ಎಫ್ 12 ಉಡಾವಣಾ ವಾಹನದ ಮೂಲಕ 2023ರ ಮೇ 29 ರಂದು ಕಕ್ಷೆಗೆ ಸೇರಿಸಲಾಗಿತ್ತು.

ಜಿಎಸ್‌ಎಲ್‌ವಿ-ಎಫ್‌15 ವಿಶೇಷ
ಸ್ಥಳೀಯ ಕ್ರಯೋಜೆನಿಕ್ ಹಂತದ ಜಿಎಸ್ಎಲ್ವಿ-ಎಫ್ 15 ಎನ್ವಿಎಸ್ -02 ಉಪಗ್ರಹವನ್ನು ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಗೆ ಸೇರಿಸಲಿದೆ. ಉಪಗ್ರಹ ಉಡಾವಣೆಯು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ. ಜಿಎಸ್ಎಲ್ವಿ-ಎಫ್ 15 ಉಡಾವಣಾ ವಾಹಕವು ಭಾರತದ ಜಿಯೋಸಿಂಕ್ರೊನಸ್ ಉಪಗ್ರಹ ಉಡಾವಣಾ ವಾಹನಗಳ ಪೈಕಿ 17 ನೇಯದ್ದು. ಸ್ವದೇಶಿ ಕ್ರಯೋ ಸ್ಟೇಜ್‌ ಹೊಂದಿರುವ 11 ನೇ ಉಡಾವಣಾ ವಾಹಕವಾಗಿದೆ. ಇದು ಸ್ಥಳೀಯ ಕ್ರಯೋಜೆನಿಕ್ ಹಂತದೊಂದಿಗೆ ಜಿಎಸ್‌ಎಲ್‌ವಿ ನಡೆಸುತ್ತಿರುವ 8 ನೇ ಕಾರ್ಯಾಚರಣೆಯ ಹಾರಾಟ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋ ಹೇಳಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ