Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮೂಗುದಾರ ; ಜಿಲ್ಲಾಧಿಕಾರಿ ನೀಡಿದ ಸೂಚನೆ ಏನು ?

ಮಂಡ್ಯ ಜಿಲ್ಲೆಯಲ್ಲಿ ವಿವಿಧ ಮೈಕ್ರೋ ಫೈನಾನ್ಸ್ ಕಂಪನಿಗಳು ಗ್ರಾಹಕರಿಂದ ಸಾಲ ವಸೂಲಿ ಮಾಡುವ ಸಂದರ್ಭದಲ್ಲಿ ಸಾಲ ಪಡೆದವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದರಿಂದ ಆತ್ಮಹತ್ಯೆ ಪ್ರಕರಣಗಳು ಮಂಡ್ಯ ಜಿಲ್ಲೆಯಲ್ಲಿ ಕಂಡು ಬರುತ್ತಿರುವುದರಿಂದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಲವು ಸೂಚನೆಗಳನ್ನು  ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ನೀಡಿರುವ ಸೂಚನೆ ಏನು ?

1. ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಸಾಲ ವಸೂಲಾತಿಗೆ ಸಂಬಂಧಪಟ್ಟಂತೆ ಅನಗತ್ಯವಾಗಿ ಸಾರ್ವಜನಿಕರಿಗೆ ಕಿರುಕುಳ, ದಬ್ಬಾಳಿಕೆ, ನಿಂದನೆ ಇವುಗಳನ್ನು ಮಾಡುವಂತಿಲ್ಲ.

2. ಸಾಲ ವಸೂಲಾತಿ ನೆಪದಲ್ಲಿ ಮನೆಗಳಿಗೆ ಭೇಟಿ ನೀಡಿ. ಯಾವುದೇ ವ್ಯಕ್ತಿಯ ಬಗ್ಗೆ ಆಗೌರವಯುತವಾಗಿ, ವ್ಯಕ್ತಿ ಘನತೆಗೆ ಕುಂದು ಬರುವಂತೆ ಅಥವಾ ಧಕ್ಕೆ ಬರುವಂತಹ ರೀತಿಯಲ್ಲಿ ವರ್ತಿಸತಕ್ಕದಲ್ಲ. ಒಂದು ವೇಳೆ ವ್ಯಕ್ತಿ ಗೌರವ ಅಥವಾ ವ್ಯಕ್ತಿ ಘನತೆಗೆ ಧಕ್ಕೆ ಬರುವಂತೆ ನಡೆದುಕೊಂಡಲ್ಲಿ ಹಾಗೂ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದಲ್ಲಿ ಅಂತಹವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಆಡಿ ದೂರು ದಾಖಲಿಸಿಕೊಳ್ಳಲು ಹಾಗೂ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಯವರಿಗೆ ಸೂಚಿಸಿದೆ.

3. ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಸಾಲ ವಸೂಲಾತಿ ಸಂದರ್ಭದಲ್ಲಿ ಕಿರುಕುಳ, ನಿಂದನೆ ಅನುಚಿತ ನಡತೆ, ಅವಹೇಳನಕಾರಿಯಾಗಿ ವರ್ತಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನೋಡೆಲ್ ಅಧಿಕಾರಿಯವರನ್ನು ನೇಮಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ. ಕಷ್ಟಕಾರ್ಪಣ್ಯಗಳನ್ನು ಆಲಿಸಲು ಸೂಚನೆ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅದರಂತೆ  ನೋಡೆಲ್ ಅಧಿಕಾರಿಯನ್ನಾಗಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್ (ಮೊ.9611817120) ಅವರನ್ನು ನೇಮಿಸಲಾಗಿದೆ. 

4. ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಸಾರ್ವಜನಿಕರಿಗೆ ಕಿರುಕುಳ ಹಾಗೂ ನಿಂದನೆ ಮಾಡಿದ್ದಲ್ಲಿ ಈ ಅಹವಾಲುಗಳನ್ನು ಸಲ್ಲಿಸಲು ಸಹಾಯವಾಣಿ ತೆರೆಯಲು ತೀರ್ಮಾನಿಸಿ ಅದರಂತೆ 08232-224655 ಸಹಾಯವಾಣಿ ತೆರೆಯಲಾಗಿದೆ, ನೊಂದವರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ.

5. RESERVE BANK OF INDIA ಮಾಡಿದ ಮಾರ್ಗಸೂಚಿ ಪ್ರಕಾರ ನಿಯಮಾನುಸಾರ ವಸೂಲಾತಿ ಕ್ರಮ ಕೈಗೊಳ್ಳಬಹುದೇ ವಿನಃ ಮಾರ್ಗಸೂಚಿಗೆ ವಿರುದ್ಧವಾಗಿ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡತಕ್ಕದಲ್ಲ.

6. ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಮನೆಯ ಗೋಡೆಗಳ ಮೇಲೆ “ಈ ಆಸ್ತಿಯನ್ನು ಅಡಮಾನ ಮಾಡಲಾಗಿದೆ” ಎಂಬ ಬಗ್ಗೆ ಬರಹ ರೂಪದಲ್ಲಿ ಬರೆಯತಕ್ಕದಲ್ಲ. ಒಂದು ವೇಳೆ ಈ ರೀತಿ ಬರವಣಿಗೆಯಲ್ಲಿ ಬರೆದಿರುವುದು ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು.

7. ಮೈಕ್ರೋ ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವಂತಹ ಸಿಬ್ಬಂದಿಗಳಿಗೆ ಸಾಲ ವಸೂಲಾತಿ ಮಾಡುವ ಬಗ್ಗೆ ಸಾರ್ವಜನಿಕರ ಬಳಿ ಯಾವ ರೀತಿ ಸೌಜನ್ಯಯುತವಾಗಿ ವರ್ತಿಸಬೇಕು ಹಾಗೂ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಸೂಕ್ತ ತರಬೇತಿಯನ್ನು ನೀಡಬೇಕು.

8. ಸಾಲ ವಸೂಲಾತಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಾಸ್ತವ ಸ್ಥಿತಿಯನ್ನು ಮತ್ತು ಬಡ್ಡಿ ದರದ (RATE OF INTEREST) ಸಂಪೂರ್ಣವಾದ ಮಾಹಿತಿಯನ್ನು ಸಾಲ ಪಡೆದುಕೊಳ್ಳುವವರಿಗೆ ನೀಡಬೇಕು. ಮತ್ತು ಸಾಲ ಮಂಜೂರಾತಿ ದಾಖಲೆಗಳನ್ನು ಪಡೆಯುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಹಾಗೂ ನಮೂನೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರತಕ್ಕದ್ದು, ಕನ್ನಡದಲ್ಲಿ ಇಲ್ಲದೇ ಇರುವ ನಮೂನೆಗಳನ್ನು ಪರಿಶೀಲಿಸಿ ಅಂತಹ ಮೈಕ್ರೋ ಫೈನಾನ್ಸ್ ಸಂಸ್ಥೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದೆ.

9. RESERVE BANK OF INDIA ಸಾಲ ಮಂಜೂರಾತಿ ಮಾಡುವ ಸಂದರ್ಭದಲ್ಲಿ ಮಿತಿಗೊಳಪಟ್ಟು ಮಂಜೂರಾತಿ ಮಾಡತಕ್ಕದ್ದು. ಹಾಗೂ ಮರು ಪಾವತಿಯ ಸಾಮರ್ಥ್ಯ (REPAYMENT OF CAPACITY) ಇರುವಂತಹವರಿಗೆ ಮಾತ್ರ ಸಾಲ ಮಂಜೂರಾತಿಯನ್ನು ಮಾಡತಕ್ಕದ್ದು.
 
10. ಸಾಲ ಮಂಜೂರಾತಿ ಸಂದರ್ಭದಲ್ಲಿ ಸಾಲ ವಸೂಲು ಮಾಡುವ ಮನೆಗಳಿಗೆ ಮುಂಜಾನೆ ಅಥವಾ ರಾತ್ರಿ ಸಮಯದಲ್ಲಿ ಭೇಟಿ ಮಾಡಿ ಅನಗತ್ಯವಾಗಿ ತೊಂದರೆ ಕೊಡುವುದು, ಕಿರುಕುಳ ನೀಡುವುದು, ನಿಂದನೆಗೆ ಒಳಪಡಿಸುವುದು ಮಾಡತಕ್ಕದಲ್ಲ. RESERVE BANK OF INDIA ಮಾರ್ಗಸೂಚಿ ಪ್ರಕಾರ ನಿಗಧಿತ ಸಮಯದಲ್ಲಿಯೇ ಭೇಟಿ ನೀಡತಕ್ಕದ್ದು.

11. ಸಾಲಗಾರರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಸಮಯಾವಕಾಶವನ್ನು ವರ್ತಿಸತಕ್ಕದ್ದು. ನೀಡುವ ಮೂಲಕ ಸಾರ್ವಜನಿಕರೊಂದಿಗೆ ಸೂಕ್ತವಾದ ಸೌಜನ್ಯದಿಂದ

12. ಸಾಲ ವಸೂಲಾತಿ ವಿಫಲವಾದ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹಾಗೂ ಕ್ರಮ ವಹಿಸುವ ಸಂದರ್ಭದಲ್ಲಿ ಸಹ ನ್ಯಾಯಾಲಯದ ಆದೇಶವನ್ನು ಸುಸ್ಥಿದಾರರಿಗೆ ತಿಳಿಸಿ, ಮನವರಿಕೆ ಮಾಡಿಕೊಟ್ಟು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಏಕಾಏಕಿ ಹೋಗಿ ಮನೆ ಜಪ್ತಿ ಮಾಡತಕ್ಕದಲ್ಲ.

13. ವಸೂಲಾತಿ ಸಂದರ್ಭದಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವಂತಿಲ್ಲ ಹಾಗೂ ನಿಂದನೆ ಮಾಡುವಂತಿಲ್ಲ ಮತ್ತು ದೌರ್ಜನ್ಯದಿಂದ ವರ್ತಿಸುವಂತಿಲ್ಲ ಹಾಗೂ ಮೊಬೈಲ್ ಮೂಲಕ ವಾಟ್ಸ್ ಅಪ್ ಸಂದೇಶಗಳನ್ನು ಸಹ ಕಳುಹಿಸುವಂತಿಲ್ಲ. ಹಾಗೂ ಅನಾಗರೀಕತೆಯಿಂದ ವರ್ತಿಸಿ ಅನಗತ್ಯವಾಗಿ ಕಿರುಕುಳ ನೀಡುವಂತಿಲ್ಲ ಒಂದು ವೇಳೆ ಈ ರೀತಿ ವರ್ತಿಸಿದಂತಹ ಸಿಬ್ಬಂದಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಯ ವಿರುದ್ಧ ದೂರು ದಾಖಲು ಮಾಡಲು ಸಂಬಂಧಿಸಿದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ