ಮಂಡ್ಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಂದಿನಿ ಕೆ.ಆರ್ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು. ಪ್ರಭಾರ ಸಿಇಓ ಆಗಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರ ಹಸ್ತಾಂತರ ಮಾಡಿ ಶುಭ ಹಾರೈಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನಂದಿನಿ ಅವರು, ಜಿಲ್ಲಾ ಪಂಚಾಯತ್ ಅಭಿವೃದ್ಧಿಗಾಗಿ ಶ್ರಮಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದ ಡಾ.ರಂಜಿತ್ ಬಿ.ಎಸ್ ಅವರನ್ನು ನಂದಿನಿ ಕೆ.ಆರ್ ಅವರು ವಿವಾಹವಾಗಿದ್ದು ಮಂಡ್ಯದೊಂದಿಗೆ ಅವರು ಅವಿನಾಭಾವ ಸಂಬಂಧ ಹೊಂದಿದ್ದಾರೆ.
ನಂದಿನಿಯವರು ಕರ್ನಾಟಕದ ಕೋಲಾರ ಜಿಲ್ಲೆಯರಾಗಿದ್ದು, ಬೆಂಗಳೂರಿನ ಎಂಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ. 2014ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದು 849 ರ್‍ಯಾಂಕ್ ಗಳಿಸಿ, ಐ.ಆರ್.ಎಸ್(ಕಸ್ಟಮ್ಸ್ ಮತ್ತು ಸೆಂಟ್ರಲ್ ಅಬಕಾರಿ) ಸೇವೆಗೆ ಆಯ್ಕೆಯಾಗಿದ್ದರು. ನಂತರ ನಾಲ್ಕನೇ ಪ್ರಯತ್ನದಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿಟ್ಟುಕೊಂಡು ಅಧ್ಯಯನ ಮಾಡಿದ ಅವರು, 2017ರಲ್ಲಿ ಐಎಎಸ್ ಟಾಪರ್ ಆಗಿ ಉತ್ತೀರ್ಣರಾಗಿದ್ದರು.




