ಯುವಪೀಳಿಗೆಯ ಯುವಕರಿಗೆ ಕೃಷಿ ಕ್ಷೇತ್ರದಲ್ಲೇ ಅನೇಕ ಉದ್ಯಮಗಳ ಅವಕಾಶ ಇದೆ ಎಂದು ನಿವೃತ್ತ ನ್ಯಾಯಾಧೀಶರಾದ ಶ್ಯಾಮ್ ಪ್ರಸಾದ್ ಹೇಳಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಓಲ್ಗಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಶಿಷ್ಟ ಸಮುದಾಯದ ಯುವಕರಿಗೆ ಕೃಷಿ ಮತ್ತು ವಾಣಿಜ್ಯೋದ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಂಬಳಕ್ಕಾಗಿ ಕೆಲಸ ಮಾಡುವವರನ್ನು ಸಮಾಜ ಬೇರೆ ದೃಷ್ಟಿಕೋನದಿಂದ ನೋಡುತ್ತದೆ, ಅದೇ ಉದ್ಯಮವನ್ನು ಮಾಡುವವರು ಕಂಡಾಗ ಅವರನ್ನು ಗೌರವಾನ್ವಿತವಾಗಿ ನೋಡುತ್ತದೆ ಎಂದರು.
ಉದ್ಯಮ ಮಾಡಲು ಅಧಿಕ ಮೊತ್ತ ಒಂದೇ ಅಗತ್ಯ ಇರುವುದಿಲ್ಲ, ಕಠಿಣವಾದ ಪರಿಶ್ರಮ ಕೌಶಲ್ಯ ಹೆಚ್ಚು ಅಗತ್ಯ, ಕೃಷಿ ಕ್ಷೇತ್ರದಲ್ಲಿಯೇ ನಾನಾ ರೀತಿಯ ಉದ್ಯಮಿಗಳು ಈಗಾಗಲೇ ಬೆಳೆದಿವೆ, ಸರ್ಕಾರವು ಪರಿಶಿಷ್ಟ ಸಮುದಾಯಗಳಿಗೆ ಅನೇಕ ಸವಲತ್ತುಗಳನ್ನು ನೀಡಿದೆ, ಅದರ ಕುರಿತು ಯುವಕರು ಗಮನ ಹರಿಸಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಲಸೆಯ ಕಾರಣ ನಮ್ಮ ಅನೇಕ ಉದ್ಯಮ ಕ್ಷೇತ್ರಗಳು ಇತರರ ಪಾಲಾಗಿದೆ. ಇದರ ಕುರಿತು ಯೋಚಿಸಿ, ಸಣ್ಣ ಸಣ್ಣ ಉದ್ದಿಮೆಗಳಿಂದ ಪ್ರಾರಂಭಿಸಿ ಪರಿಶಿಷ್ಟ ಸಮುದಾಯದ ಯುವಕರು ಆರ್ಥಿಕವಾಗಿ ಸದೃಢರಾಗಬೇಕು ಮತ್ತು ಕಾರ್ಯಕ್ರಮದ ಮೂಲ ಉದ್ದೇಶವೇ ಹಿಂದುಳಿದ ಸಮುದಾಯದ ಯುವಕರನ್ನು ಸ್ವಾವಲಂಬಿ ಮಾಡುವುದು ಎಂದು ಹೇಳಿದರು.
ಪತ್ರಕರ್ತ ಪಾರ್ವತೀಶ್ ಮಾತನಾಡಿ, ಪ್ರಸಕ್ತ ಯುಗದಲ್ಲಿ ವಾಣಿಜ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಲಭ್ಯವಿದೆ, ಅವುಗಳನ್ನು ಪರಿಶಿಷ್ಟ ಸಮುದಾಯದ ಯುವಕರು ಸರಿಯಾಗಿ ಉಪಯೊಗಿಸಿಕೊಳ್ಳದಿರುವುದು ವಿಪರ್ಯಾಸ ಎಂದರು.
ಕರ್ನಾಟಕದಲ್ಲಿ ಹಿಂದೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೈಗಾರಿಕಾ ಶೈಕ್ಷಣಿಕ ವಿಷಯದಲ್ಲಿ ಪ್ರಗತಿ ಸಾಧಿಸಿದರು. ಅವರು ಅನೇಕ ಉದ್ಯಮಗಳನ್ನು ಸ್ಥಾಪಿಸಿ ಅನೇಕರಿಗೆ ಆಸರೆಯಾಗಿ ನಿಂತವರು, ಸರ್ಕಾರಿ ಒಡೆತನದಲ್ಲಿನ ಉದ್ಯಮಗಳ ಮೇಲೆ ಖಾಸಗಿ ಉದ್ಯಮಗಳು ಹಿಡಿತ ಸಾಧಿಸುತ್ತಿವೆ ಎಂದು ತಿಳಿಸಿದರು.
ನಮ್ಮಲ್ಲಿ ಇರುವ ಇಚ್ಛಾಶಕ್ತಿ, ಪರಿಶ್ರಮ, ಕೌಶಲ್ಯದಿಂದ ಮಾತ್ರ ಉದ್ಯಮವನ್ನು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ, ಉತ್ತಮ ಗುಣಮಟ್ಟ ಮತ್ತು ಸೂಕ್ತ ಬೆಲೆಯನ್ನು ನಿಗದಿಪಡಿಸಿದಾಗ ಮಾತ್ರ ಉದ್ಯಮದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು ಎಂದು ಹೇಳಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್,ಜಿಲ್ಲಾ ಫೌಂಡೇಶನ್ ಅಧ್ಯಕ್ಷ ಶಿವರುದ್ರಯ್ಯ, ವಕೀಲ ಲಕ್ಷ್ಮಣ್ ಚೀರನಹಳ್ಳಿ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.




