ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಸೊಸೈಟಿ ಚುನಾವಣೆಗೆ ಸಂಬಂಧಿಸಿದಂತೆ ತಮಗೆ ಇಷ್ಟ ಬಂದ ದಿನ ಚುನಾವಣೆ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕ ನರೇಂದ್ರಸ್ವಾಮಿ ಒತ್ತಡ ಹೇರಿದ್ದಾರೆಂದು ಮಾಜಿ ಶಾಸಕ ಕೆ.ಅನ್ನದಾನಿ ಆರೋಪ ಮಾಡಿದರು.
ಮಳವಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮನ್ಮುಲ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ವಿಶ್ವನಾಥ್, ವಡ್ಡರಹಳ್ಳಿ ಸಹಕಾರ ಸಂಘದ ಚುನಾವಣೆಗೆ ಸಹ ಸ್ಪರ್ಧಿಸಿದ್ದರು, ಅವರಿಗೆ ತೊಂದರೆ ನೀಡುವ ಉದ್ದೇಶದಿಂದ ಮನ್ಮುಲ್ ಚುನಾವಣೆಯ ಹಿಂದಿನ ದಿನವೇ ವಡ್ಡರಹಳ್ಳಿ ಚುನಾವಣೆ ನಡೆಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಜೊತೆಗೆ ಮನ್ ಮುಲ್ ಚುನಾವಣೆಯಲ್ಲಿ ಸಹ ಅಕ್ರಮ ನಡೆಸಿದ್ದು ವಿಶ್ವನಾಥ್ ಅವರಿಗೆ ಬರಬೇಕಿದ್ದ ಒಂದು ಮತವನ್ನು ಅಸಿಂಧುಗೊಳಿಸುವಂತೆ ಸಹಕಾರ ಇಲಾಖೆ ಮೇಲೆ ಶಾಸಕರು ಹಾಗೂ ಜಿಲ್ಲಾಡಳಿತ ಒತ್ತಡ ಹೇರಿ ಅಕ್ರಮವೆಸಗಿದ್ದಾರೆ ದೂರಿದರು.
ಇದೇ ವೇಳೆ ಇದೇ ಫೆ.10ರಂದು ನಡೆಯುವ ಪಿ ಎಲ್ ಡಿ ಬ್ಯಾಂಕ್ ಚುನಾವಣೆಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಅನ್ನದಾನಿ, ಹಲಗೂರು 1ನೇ ಭಾಗಕ್ಕೆ ಶಿವಣ್ಣ, 2ಕ್ಕೆ ಸುಂದ್ರಮ್ಮ, 3ಕ್ಕೆ ರೇವಣ್ಣ, ಕಸಬಾ ಹೋಬಳಿ 1ಕ್ಕೆ ಗುಳ್ಳಗಟ್ಟ ಜವರೇಗೌಡ, 2ಕ್ಕೆ ಆಲದಹಳ್ಳಿ ದೊಡ್ಡಮಾದೇಗೌಡ, 3ಕ್ಕೆ ಎಸ್ಸಿ ಮೀಸಲು ಅಭ್ಯರ್ಥಿಯಾಗಿ ಬಾಣಸಮುದ್ರದ ಪ್ರಸನ್ನ ಕುಮಾರ್, ಬಿ ಜಿ ಪುರ ಹೋಬಳಿಯ 1ಕ್ಕೆ ಬಿಜೆಪಿಯ ಶಿವಣ್ಣ, 2ಕ್ಕೆ ಬಿಸಿಎಂ ಮೀಸಲು ಅಭ್ಯರ್ಥಿಯಾಗಿ ಮಂಚನಹಳ್ಳಿ, ಶಿವಣ್ಣ, ಕಿರುಗಾವಲು 1ಕ್ಕೆ ಹಾಲಿ ಅಧ್ಯಕ್ಷರಾದ ಶಿವಮಲ್ಲಪ್ಪ, 2ಕ್ಕೆ ಹಿಟ್ಟನಹಳ್ಳಿ ಕೊಪ್ಪಲು ವೀರೇಶ್ ಗೌಡ, 3ನೇ ಭಾಗಕ್ಕೆ ತಳಗವಾದಿ ಹನು ಮಂತು ಅವರನ್ನು ಅಭ್ಯರ್ಥಿ ಮಾಡಲಾಗಿದೆ ಎಂದರು.
ಮಳವಳ್ಳಿ ಪಟ್ಟಣದ 2 ನೇ ಭಾಗದ ಮಹಿಳಾ ಮೀಸಲು ಕ್ಷೇತ್ರಕ್ಕೆ ನಂದಿನಿ ಆನಂದ್ ಹಾಗೂ ಸಾಲಗಾರರಲ್ಲದ ತಾಲೂಕಿನ ಒಂದು ಕ್ಷೇತ್ರಕ್ಕೆ ವಿದ್ಯಾ ಮಾಯಣ್ಣ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದು ಇವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಮುಖಂಡರಾದ ಬಿ ರವಿ, ಹನುಮಂತು, ಮಲ್ಲೇಗೌಡ, ಬುಲೆಟ್ ಲಿಂಗಣ್ಣ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷರಾದ ಶಿವಮಲ್ಲಪ್ಪ ಮತ್ತಿತರರು ಹಾಜರಿದ್ದರು.




