Friday, November 20, 2026

ಪ್ರಾಯೋಗಿಕ ಆವೃತ್ತಿ

ಮೈಸೂರು | 400 ಟ್ರೇನಿಗಳನ್ನು ವಜಾಗೊಳಿಸಲು ಮುಂದಾದ ಇನ್ಫೋಸಿಸ್ ; ಭಾರೀ ಆಕ್ರೋಶ

ಪ್ರಸಿದ್ದ ಸಾಪ್ಟ್ ವೇರ್ ರಫ್ತು ಕಂಪನಿ ಇನ್ಫೋಸಿಸ್ ತನ್ನ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ಪಡೆಯುತ್ತಿದ್ದ 400 ಸಿಸ್ಟಮ್ ಇಂಜಿನಿಯರ್ಸ್ (ಎಸ್‌ಇ) ಮತ್ತು ಡಿಜಿಟಲ್ ಸ್ಪೆಷಲಿಸ್ಟ್ ಇಂಜಿನಿಯರ್ಸ್ (ಡಿಎಸ್‌ಇ) ಹುದ್ದೆಗಳಿಗೆ ಆಯ್ಕೆಯಾಗಿದ್ದ ಟ್ರೇನಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಇನ್ಫೋಸಿಸ್ ನ ಈ ಕ್ರಮದ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಮೂರು ಬಾರಿ ಅನುತ್ತೀರ್ಣರಾದ ನಂತರ ಟ್ರೇನಿಗಳ ಮೇಲೆ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮನಿ ಕಂಟ್ರೋಲ್‌ ವರದಿ ಮಾಡಿದ್ದು, ಇವರನ್ನು 2024ರ ಅಕ್ಟೋಬರ್‌ನಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಅರ್ಧದಷ್ಟು ಜನರನ್ನು ಕೆಲಸದಿಂದ ತೆಗೆದು ಹಾಕಲು ಕಂಪನಿ ಹೊರಟಿದೆ. ಇವರನ್ನೆಲ್ಲ ಸುಮಾರು ಎರಡೂವರೆ ವರ್ಷಗಳ ಕಾಲ ಕಾಯುವಂತೆ ಮಾಡಿ ನಂತರ ಇನ್ಫೋಸಿಸ್‌ ನೇಮಕ ಮಾಡಿಕೊಂಡಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇನ್ಫೋಸಿಸ್‌, “ಸಂಸ್ಥೆಯಲ್ಲಿ ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ನಾವು ಹೊಂದಿದ್ದೇವೆ. ನಮ್ಮ ಮೈಸೂರು ಕ್ಯಾಂಪಸ್‌ನಲ್ಲಿ ಪ್ರಾಥಮಿಕ ತರಬೇತಿ ಪಡೆದ ನಂತರ ಎಲ್ಲಾ ಹೊಸಬರು ಆಂತರಿಕ ಮೌಲ್ಯಮಾಪನಗಳಲ್ಲಿ ಉತ್ತೀರ್ಣರಾಗಬೇಕು. ಎಲ್ಲಾ ಹೊಸಬರಿಗೆ ಇದರಲ್ಲಿ ಉತ್ತೀರ್ಣರಾಗಲು ಮೂರು ಅವಕಾಶಗಳನ್ನು ನೀಡಲಾಗುತ್ತದೆ. ಇದರಲ್ಲಿ ವಿಫಲವಾದಲ್ಲಿ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ಅವರ ಜೊತೆಗಿನ ಒಪ್ಪಂದದಲ್ಲಿಯೂ ಇದನ್ನು ಉಲ್ಲೇಖಿಸಲಾಗಿರುತ್ತದೆ. ಈ ಪ್ರಕ್ರಿಯೆ ಎರಡು ದಶಕಗಳಿಂದಲೂ ಚಾಲ್ತಿಯಲ್ಲಿದೆ. ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪ್ರತಿಭೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಹೊಂದಿದ್ದೇವೆ,” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಟ್ರೇನಿಗಳನ್ನು ವಜಾಗೊಳಿಸುವ ಕ್ರಮ ಅನ್ಯಾಯ. ಪರೀಕ್ಷೆಗಳು ತುಂಬಾ ಕಠಿಣವಾಗಿದ್ದವು ಮತ್ತು ನಮ್ಮನ್ನು ಫೇಲ್ ಮಾಡಲೆಂದೇ ಹೀಗೆ ಮಾಡಲಾಗಿತ್ತು. ನಮ್ಮ ಭವಿಷ್ಯ ಕತ್ತಲೆಯಾಗಿದ್ದು, ತರಬೇತಿ ಪಡೆದ ಅನೇಕರು ದಿಕ್ಕು ಕಾಣದಾಗಿದ್ದಾರೆ’ ಎಂದು ಉದ್ಯೋಗ ಕಳೆದುಕೊಂಡವರು ಹೇಳಿದ್ದಾಗಿಯೂ ಮನಿಕಂಟ್ರೋಲ್‌ ಹೇಳಿದೆ.

ತರಬೇತಿ ಪಡೆದವರು ಮೊಬೈಲ್ ಫೋನ್‌ಗಳನ್ನು ಒಯ್ಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತು ಎನ್ನಲಾಗಿದೆ. ಆದರೆ, ಇನ್ಫೋಸಿಸ್‌ ಇದನ್ನು ನಿರಾಕರಿಸಿದ್ದು, ಸಂಜೆ 6 ಗಂಟೆಯೊಳಗೆ ಆವರಣವನ್ನು ಖಾಲಿ ಮಾಡುವಂತೆ ಟ್ರೇನಿಗಳಿಗೆ ಸೂಚಿಸಿದೆ ಎಂದು ಹೇಳಲಾಗಿದೆ.

ಇನ್ಫೋಸಿಸ್‌ ಕ್ರಮದ ವಿರುದ್ಧ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತ ದೂರು ಸಲ್ಲಿಸುತ್ತಿರುವುದಾಗಿ ನಾಸೆಂಟ್‌ ಇನ್ಫೋರ್ಮೇಷನ್‌ ಟೆಕ್ನಾಲಜಿ ಎಂಪ್ಲಾಯೀಸ್‌ ಸೆನೆಟ್‌ (ಎನ್‌ಐಟಿಇಎಸ್) ಹೇಳಿದೆ. ಇನ್ಫೋಸಿಸ್ ವಿರುದ್ಧ ತಕ್ಷಣದ ಮಧ್ಯಸ್ಥಿಕೆ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

“ಈ ಕಾರ್ಪೊರೇಟ್ ಶೋಷಣೆಯನ್ನು ಮುಂದುವರಿಯಲು ಬಿಡುವುದಿಲ್ಲ. ಭಾರತೀಯ ಐಟಿ ಕಾರ್ಮಿಕರ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯಲು ಸರ್ಕಾರವು ತ್ವರಿತ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ,” ಎಂದು ಎನ್‌ಐಟಿಇಎಸ್‌ನ ಹರ್ಪ್ರೀತ್ ಸಿಂಗ್ ಸಲುಜಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ