ವರದಿ: ನ.ಲಿ.ಕೃಷ್ಣ
ವಿಶ್ವ ರೈತನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 89 ನೇ ಜಯಂತೋತ್ಸವವು ಫೆ.13ರಂದು ಬೆಳಿಗ್ಗೆ 9 ಗಂಟೆಗೆ ಮದ್ದೂರಿನ ಟಿ.ಬಿ ಸರ್ಕಲ್ ವೃತ್ತದ ಪ್ರೊ.ಎಂ.ಡಿ.ಎನ್ ಪ್ರತಿಮೆ ಬಳಿ ನಡೆಯಲಿದೆ ಎಂದು ಮದ್ದೂರಿನ ಪ್ರೊ.ಎಂ.ಡಿ ನಂಜುಂಡಸ್ವಾಮಿ ರೈತ ಚೈತನ್ಯ ಕೇಂದ್ರದ ಅಧ್ಯಕ್ಷ ನ.ಲಿ.ಕೃಷ್ಣ ತಿಳಿಸಿದ್ದಾರೆ.
ಪ್ರೊ.ಎಂ.ಡಿ ನಂಜುಂಡಸ್ವಾಮಿಯವರ ಚಿಂತನೆ ಹಾಗು ವಿಚಾರಧಾರೆಗಳು ವರ್ಷಗಳು ಉರುಳಿದಂತೆಲ್ಲಾ ಹೆಚ್ಚೆಚ್ಚು ಉಪಯುಕ್ತವು ಅತ್ಯಗತ್ಯವು ಆಗಿದೆ. ಅವರು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಉಂಟು ಮಾಡುವ ಆಪಾಯದ ಕುರಿತು ಎಚ್ಚರಿಸಿದ ಸಂಗತಿಗಳು ಇಂದು ವಾಸ್ತವವಾಗಿ ರೈತರು ಜನಸಾಮಾನ್ಯರನ್ನು ಕಾಡುತ್ತಿವೆ. ಆ ಕಾರಣದಿಂದ ಸಮಾಜ ಇನ್ನಾದರೂ ಜಾಗೃತಗೊಂಡು ಸಾಂಘಿಕ ಪ್ರಯತ್ನದ ಮೂಲಕ ತಮ್ಮ ರಕ್ಷಣೆಗೆ ಮುಂದಾಗಬೇಕಾದ ಜರೂರು ಇದೆ ನ.ಲಿ.ಕೃಷ್ಣ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜಯಂತಿ ಜನೋತ್ಸವವಾಗಿ ಆಚರಿಸಲ್ಪಡುತ್ತಿದ್ದು,
ರಾಜ್ಯದಲ್ಲೇ ಮೊದಲಿಗೆ ಪ್ರೊ.ಎಂ.ಡಿ.ಎನ್ ಪ್ರತಿಮೆ ಸ್ಥಾಪಿಸಿದ ಹಿರಿಮೆ ಜಾಗೃತ ಹೊರಾಟಗಳ ಭೂಮಿಕೆಯಾದ ಮದ್ದೂರಿನಲ್ಲಿ ನಾಳೆ ಹಲವು ಸಂಘ ಸಂಸ್ಥೆಗಳು ಹಾಗು ನಾಗರೀಕರು ಈ ಜನೋತ್ಸವದಲ್ಲಿ ಸ್ವ ಪ್ರೇರಣೆಯಿಂದ ಭಾಗವಹಿಸುತ್ತಿವೆ ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷ, ಕನ್ನಡ ಸಾಹಿತ್ಯ ಪರಿಷತ್, ಸಂವಿಧಾನ ರಕ್ಷಣಾ ಸಮಿತಿ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ತೆಂಗು ಬೆಳೆಗಾರರ ಸಂಘ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಲಿವೆ.




