ಮಂಡ್ಯ ಜಿಲ್ಲೆಯಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಮತ್ತು ನೇರ ಪಾವತಿಯಡಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕ, ವಾಹನ ಲೋಡರ್‍ಸ್, ಕ್ಲೀನರ್‍ಸ್ ಹಾಗೂ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಹಾಗೂ ನೇರಪಾವತಿಯಡಿಯಲ್ಲಿ ಸುಮಾರು ೨೦ ವರ್ಷಗಳಿಂದ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಸೇವೆಯನ್ನು ಪರಿಗಣಿಸದೇ ಇರುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವಂತೆ ಮನವಿ ಮಾಡಿದರು.
ನೇರ ಪಾವತಿಯಲ್ಲಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರ ಜೇಷ್ಠತಾ ಪಟ್ಟಿ ತಯಾರಿಸಿ, ಹೆಚ್ಚು ಸೇವೆಸಲ್ಲಿಸಿದ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಆದ್ಯತೆ ನೀಡಬೇಕು, ಅನಾರೋಗ್ಯಕ್ಕೆ ತುತ್ತಾಗುವ ಪೌರಕಾರ್ಮಿಕರ ಆಸ್ಪತ್ರೆಯ ವೆಚ್ಚ ಭರಿಸಲು ಹಣ ರಹಿತ ಕಾರ್ಡ್ ವ್ಯವಸ್ಥೆ, ಜಿಲ್ಲೆಯಲ್ಲಿ ಸಂಕಷ್ಟ ಭತ್ಯೆ ನೀಡುವುದು, ಚಾಮರಾಜನಗರ, ಗುಂಡ್ಲುಪೇಟೆ, ಚಿಕ್ಕಬಳ್ಳಾಪುರದಂತೆ ನಗರದ ೫ ಕಿ.ಮೀ ವ್ಯಾಪ್ತಿಯಲ್ಲಿ ನಿವೇಶನ ನೀಡುವುದು, ಪೌರ ಕಾರ್ಮಿಕರ ಕಾಲೋನಿಯಲ್ಲಿನ ೨೮ ಮನೆಗಳಿಗೆ ಹಕ್ಕುಪತ್ರ ಮಾಡಿಕೊಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಬಜೆಟ್ ಘೋಷಣೆಯ ಮೂಲಕ ಈಡೇರಿಸುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಆರ್.ಶಿವಣ್ಣ, ರಾಜ್ಯ ಸಂಚಾಲಕ ಆರ್.ವಾಸು, ಜಿಲ್ಲಾಧ್ಯಕ್ಷ ಗಣೇಶ್, ಆರ್‌ಟಿಸ್ಟ್ ನಾಗರಾಜು, ಉಪಾಧ್ಯಕ್ಷ ಶಿವಕುಮಾರ್, ಗಣೇಶ್, ಶ್ರೀನಿವಾಸ್ ಇದ್ದರು.




