ಯುವ ಸಮುದಾಯ ಮಾದಕ ವಸ್ತುಗಳ ಸೇವನೆ ಮತ್ತು ಬಳಕೆಯಿಂದ ದೂರವಿದ್ದು, ಆರೋಗ್ಯಕರ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು ಎಂದು ಅಬಕಾರಿ ಜಿಲ್ಲಾ ಅಧಿಕಾರಿ ಆರ್.ನಾಗಶಯನ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ನಗರದ ಮಾಂಡವ್ಯ ಎಕ್ಸ್‌ಲೆನ್ಸ್ ಪಿಯು ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಂಡ್ಯ ಜಿಲ್ಲಾ ಅಬಕಾರಿ ನಿರೀಕ್ಷಕರ ಕಚೇರಿ ವತಿಯಿಂದ ಶುಕ್ರವಾರ ನಡೆದ ಅಬಕಾರಿ ಕಾಯ್ದೆ ಮತ್ತು ಮಾದಕ ವಸ್ತುಗಳ ಸಂಬಂಧ ಅರಿವು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ರಮ ಮದ್ಯ: ಮಾಹಿತಿ ನೀಡಿ
ಸಾರ್ವಜನಿಕ ವಲಯದಲ್ಲಿ ಅಕ್ರಮ ಮದ್ಯ ಮಾರಾಟ ಅಥವಾ ಸಂಗ್ರಹಣೆ ಹಾಗೂ ಮಾದಕ ವಸ್ತುಗಳ ಬಳಕೆ,ಮಾರಾಟ,ಶೇಕರಣೆ ಕಂಡು ಬಂದರೆ ‘ಡ್ರಗ್ ಫ್ರೀ ಕರ್ನಾಟಕ ಆ್ಯಪ್’ ಮೂಲಕ ಮಾಹಿತಿ ನೀಡಬಹುದು.ನಾವು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡುತ್ತೇವೆ.ಯಾವುದೇ ಆತಂಕ ಬೇಡ, ಇಂತಹ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ಎನ್‍ಡಿಪಿಎಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳ ಲಾಗುವುದು.ಅಲ್ಲದೆ ಅಬಕಾರಿ ಇಲಾಖೆ ಕೂಡ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ಯುವ ಸಮುದಾಯದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಬಳಕೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.ಯುವ ಸಮುದಾಯ ಮಾದಕ ವಸ್ತುಗಳಿಂದ ಆರೋಗ್ಯ ನಾಶವಾಗುವ ಹಿನ್ನಲೆಯಲ್ಲಿ ಅವುಗಳಿಂದ ದೂರವಿರಬೇಕು.ಯುವ ಸಮುದಾಯ ಉತ್ತಮ, ಆರೋಗ್ಯಕರ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಮಂಡ್ಯ ಜಿಲ್ಲೆ 20 ಲಕ್ಷ ಜನಸಂಖ್ಯೆ ಹೊಂದಿದೆ. ಇಲ್ಲಿ 360 ವೈನ್ ಶಾಪ್‌ಗಳಿಂದ 24 ಲಕ್ಷ ಲೀಟರ್ ಮದ್ಯ ಮಾರಾಟ ಆಗುತ್ತಿದೆ. ದೇಶದಲ್ಲಿ ಶೇ.60 ರಷ್ಟು ಯುವ ಜನರಿದ್ದಾರೆ. ವಿಶ್ವ ನಮ್ಮ ಕಡೆ ತಿರುಗಿ ನೋಡುತ್ತಿರುವುದು ಆಶಾದಾಯಕದ ಬೆಳವಣಿಗೆ ಆಗಿದೆ. ಉತ್ತರ ಭಾರತದಿಂದ ಕೆಲಸ ಮಾಡಲು ಯುವಕರು ದಕ್ಷಿಣ ಭಾರತದ ಕಡೆ ಬರುತ್ತಿದ್ದಾರೆ. ಆದರೆ ದಕ್ಷಿಣ ಭಾರತದ ಯುವಕರು ಕೆಲಸ ಮಾಡಲು ಹೊರ ದೇಶಗಳಿಗೆ ಹೋಗುತ್ತಿದ್ದಾರೆ ಎಂದರು.
ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಯುವ ಜನತೆ ದುಶ್ಚಟಗಳಿಂದ ದೂರ ಇರಬೇಕು.ಇಂದು ವಿದ್ಯಾರ್ಥಿ ದಿಸೆಯಲ್ಲಿಯೇ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ಆಯೋಜಿಸುವ ಮೂಲಕ ದುಶ್ಚಟಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಅಧೀಕ್ಷಕ ಎನ್.ರವೀಶ್, ಉಪ ಅಬಕಾರಿ ಅಧೀಕ್ಷಕ ಸೋಮಶೇಖರ್, ಅಬಕಾರಿ ನಿರೀಕ್ಷಕಿ ವಂದನಾ, ಉಪ ಪ್ರಾಂಶುಪಾಲ ಪ್ರೊ.ಮಹೇಶ್ ಭಾಗವಹಿಸಿದ್ದರು.




