ರಾಜ್ಯದಲ್ಲಿ ಡಿಸೆಂಬರ್ ೩೧ರಿಂದ ಮಾರ್ಚ್ ೨೯ವರೆಗೆ ನಡೆಯುತ್ತಿರುವ ನಂದಿ ರಥಯಾತ್ರೆಯು ಮಾ.4ರಂದು ಮಂಡ್ಯ ಪ್ರವೇಶಿಸಲಿದ್ದು, ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಗುವುದು ಎಂದು ಅನಂತರಾವ್ ಕೆರಗೋಡು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 4ರ ಸಂಜೆ 4 ಗಂಟೆಗೆ ನಂದಿ ರಥಯಾತ್ರೆ ಮಂಡ್ಯ ಪ್ರವೇಶಿಸಲಿದ್ದು, ನಗರದ ಹೊಸಹಳ್ಳಿಯಲ್ಲಿ ಮಂಗಳವಾದ್ಯ, ವಿವಿಧ ಕಲಾತಂಡಗಳು ಹಾಗೂ ಸ್ಥಳೀಯ ಹಳ್ಳಿಕಾರ್ ನಂದಿಗಳೊಳಗೊಂಡಂತೆ ಭವ್ಯ ಮೆರವಣಿಗೆಯನ್ನು ಆರಂಭಿಸಲಾಗುವುದು ಎಂದರು.
ಮಂಡ್ಯ ನಗರದ ಹೊಸಹಳ್ಳಿ ವೃತ್ತದಿಂದ ವಿವಿ ರಸ್ತೆ, ಮಹಾವೀರ ವೃತ್ತ, ಜಯಚಾಮರಾಜೇಂದ್ರ ವೃತ್ತ, ಆರ್‌ಪಿ ರಸ್ತೆ, ಕೆ.ಆರ್.ರಸ್ತೆಯಲ್ಲಿ ಸಾಗಿ ರಾಘವೇಂದ್ರ ದೇವಾಲಯದಲ್ಲಿ ಮೆರವಣಿಗೆ ಸಮಾಪ್ತಿಗೊಳ್ಳುವುದು ಎಂದು ಹೇಳಿದರು.
ಹಳ್ಳಿಕಾರ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರವಿ ಪಟೇಲ್ ಮಾತನಾಡಿ, ಮೆರವಣಿಗೆಯಲ್ಲಿ 25 ಎತ್ತಿನ ಗಾಡಿಗಳಲ್ಲಿ ದೇಸಿ ರಾಸುಗಳು ಹಾಗೂ ೨೦ಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಪಾಲ್ಗೊಳ್ಳಲಿದ್ದು, ಜಿಲ್ಲೆಯ ಯುವಕರು ಹಾಗೂ ರೈತರು ಮೆರವಣಿಗೆಯಲ್ಲಿ ಭಾಗವಹಿಸಿ, ಯಶಸ್ಸಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ನಂದಿ ರಥಯಾತ್ರೆಯ ಮೂಲಕ ದೇಸಿ ತಳಿಗಳನ್ನು ಉಳಿಸಿಕೊಳ್ಳುವುದರ ಜೊತೆಗೆ, ವಿವಿಧ ಪ್ರಾಂತ್ಯಗಳ ದೇಸಿ ತಳಿಗಳ ಗಂಡು ರಾಸುಗಳನ್ನು ರಕ್ಷಿಸಿ, ಅವುಗಳ ಮೂತ್ರ ಹಾಗೂ ಸಗಣಿಯ ಮೂಲಕ ಉತ್ಪನ್ನಗಳನ್ನು ತಯಾರಿಸಿ, ಲಾಭದಾಯಕ ಮಾರ್ಗವನ್ನು ಕಂಡುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಸೋಮಶೇಖರ್, ಮಂಚೇಗೌಡ, ರಾಮಕೃಷ್ಣ ಇದ್ದರು.




