ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಲಿಂಗಾಯತ ಸಮಾವೇಶದಲ್ಲಿ ವಚನ ದರ್ಶನ ಮಿಥ್ಯ ಸತ್ಯ ಎಂಬ ಗ್ರಂಥ ಬಿಡುಗಡೆ ಸಂದರ್ಭದಲ್ಲಿ ಹಿರಿಯ ಹೆಸರಾಂತ ಸಾಹಿತಿ ನಾಡೋಜ ಗೊ.ರು.ಚನ್ನಬಸಪ್ಪನವರು ವೀರಶೈವ ಪದ ಬೇಡ, ಲಿಂಗಾಯತ ಪದವನ್ನೇ ಬಳಸುವಂತೆ ಸತ್ಯವನ್ನು ಹೇಳಿದ್ದಾರೆ. ಈ ಸತ್ಯ ಅರಗಿಸಿಕೊಳ್ಳಲಾಗದ ಪಂಚಪೀಠದ ರಂಭಾಪುರಿ ಕೇದಾರನಾಥ ಶ್ರೀಗಳು, ಗೊ.ರು.ಚ ಅವರನ್ನು ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರಶ್ರೀಗಳು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಿನ ಲಿಂಗದಲ್ಲಿ ರೇಣುಕಾಚಾರ್ಯರು ಜನಿಸಿ ಜಗದ್ಗುರುವಾದರು ಎಂದು ಪಂಚಪೀಠದ ಗುರುಗಳು ಅನಾದಿಕಾಲದಿಂದಲೂ ಜನರನ್ನು ಕಪೋಲಕಲ್ಪತ ಕಥೆಯನ್ನು ಕಟ್ಟಿ ಧಾರ್ಮಿಕವಾಗಿ ದಿಕ್ಕುತಪ್ಪಿಸುತ್ತಿರುವುದು ಖಂಡನೀಯ. ಪಂಚಪೀಠಗಳ ಮಠಾಧೀಶರು ಲಿಂಗಾಯತ ಧರ್ಮದ ವಿಚಾರ ಮಾತನಾಡುವಾಗ ಪ್ರಜ್ಞಾವಂತರಾಗಿ ಎಚ್ಚರಿಕೆಯಿಂದ ಇರಬೇಕೆಂದು ಎಚ್ಚರಿಸಿದರು.
ರೇಣುಕಾಚಾರ್ಯರೆಂಬ ಕಾಲ್ಪನಿಕ ವ್ಯಕ್ತಿಯನ್ನ ಇಟ್ಟುಕೊಂಡು ಕಾಗಕ್ಕ ಗುಬ್ಬಕ್ಕನ ಕಥೆಯಂತಿರುವ ಪುರಾಣವನ್ನೇ ಇತಿಹಾಸ ಎಂದು ತಿಳಿದಿರುವ ನಿಮ್ಮ ತಪ್ಪು ಕಲ್ಪನೆಯನ್ನ ಬಿಟ್ಟು ಬಸವದಿ ಶರಣರ ವಚನಗಳನ್ನ ಅಧ್ಯಯನ ಮಾಡಿ ತತ್ವ ವಿಚಾರಕ್ಕೆ ಬಂದು ಲಿಂಗಾಯತ ಧರ್ಮದ ಒಳಗಡೆ ಸೇರಿಕೊಳ್ಳಿ, ಇಲ್ಲ ನಿಮ್ಮ ಪಾಡಿಗೆ ನೀವು ಇದ್ದುಬಿಡಿ ಜನರಲ್ಲಿ ಗೊಂದಲ ಸೃಷ್ಟಿ ಮಾಡಡಬೇಡಿ ಎಂದು ಸಲಹೆ ನೀಡಿದರು.
ಜನರ ದಿಕ್ಕು ತಪ್ಪಿಸುವ ಕೆಲಸ ಈಗಲಾದರೂ ಬಿಡಿ, ತಮಗೆ ವಯಸ್ಸಾಗಿದೆ, ಕೊನೆಗಾಲದಲ್ಲಾದರೂ ಸಮಾಜಕ್ಕೆ ಒಳ್ಳೆಯ ಸಂದೇಶವನ್ನ ನೀಡಿ, ಧರ್ಮ ಹೊಡೆಯುವ ಕೆಲಸವನ್ನು ಮಾಡುವುದನ್ನು ಬಿಡಬೇಕು ಹಿರಿಯ ಸಾಹಿತಿಗಳ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡುವುದು ಒಳ್ಳೆಯದು. ಮಠಾಧೀಶರಾಗಿರುವ ನಿಮಗೆ ಹಿರಿಯರ ಬಗ್ಗೆ ಗೌರವ ಕೊಟ್ಟು ಮಾತನಾಡುವ ಮನೋಭಾವ ಇಲ್ಲ ಎಂದರೆ ಜನಕ್ಕೆ ಏನೂ ಸಂದೇಶ ನೀಡುತ್ತೀರಿ? ಎಂದು ಪ್ರಶ್ನಿಸಿದರು.
ಬಸವಣ್ಣನವರ ಭಾವಚಿತ್ರವಿಡದ ಧರ್ಮದ್ರೋಹಿಗಳು
ವಿಶ್ವಗುರು ಬಸವಣ್ಣನವರನ್ನು ವಿಶ್ವವೇ ಒಪ್ಪಿದೆ. ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕರ್ನಾಟಕ ಸರ್ಕಾರ ಎಲ್ಲಾ ಸರ್ಕಾರಿ ಕಛೇರಿ ಗಳಲ್ಲೂ ಬಸವಣ್ಣನವರ ಭಾವಚಿತ್ರವನ್ನು ಇಡುವಂತೆ ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ. ಪಂಚಾಚಾರ್ಯರಾದ ನೀವುಗಳೇ ಬಸವಣ್ಣನವರ ಜಯಂತಿಯನ್ನು ಮಾಡದೆ ಬಸವಣ್ಣನವರ ಭಾವಚಿತ್ರವನ್ನು ಇಡದೆ ಧರ್ಮ ದ್ರೋಹಿ ಕೆಲಸವನ್ನು ಮಾಡುತ್ತಿದ್ದೀರಿ, ಬಸವಣ್ಣನವರ ಇಷ್ಟಲಿಂಗ ಪರಿಕಲ್ಪನೆಯನ್ನು ಅರ್ಥೈಸಿಕೊಂಡು ಬಸವಧರ್ಮ ಪ್ರಚಾರದಲ್ಲಿ ನಿರತರಾಗಬೇಕು. ಲಿಂಗಾಯತ ಧರ್ಮ ಎಲ್ಲಾ ಜನಾಂಗದವರನ್ನು ಗೌರವಿಸುವ ಪ್ರೀತಿಸುವ ಮನೋಭಾವ ಉಳ್ಳ ವಿಶ್ವ ಧರ್ಮ. ಪುರಾಣ, ಶಾಸ್ತ್ರ ಹೋಮ ಮೂಡನಂಬಿಕೆ ತಿರಸ್ಕರಿಸುವ ಧರ್ಮವಾಗಿದೆ. ಹಣದ ಆಸೆಗಾಗಿ ಧರ್ಮದ ಮಹತ್ವವನ್ನೇ ಮರೆತಿರುವ ನೀವು ಈಗಿನ ಆಧುನಿಕ ಕಾಲದಲ್ಲೂ ಶಾಸ್ತ್ರ ಹೇಳಿಕೊಂಡು, ಹೋಮ ಕಂದಾಚಾರ ಮಾಡುವ ವೃತ್ತಿಯನ್ನ ಇಟ್ಟುಕೊಂಡಿರುವುದು ನಾಚಿಕೆಗೇಡಿನ ವಿಚಾರ ಎಂದು ಖಂಡಿಸಿದರು.
ಗೋಷ್ಠಿಯಲ್ಲಿ ಲಿಂಗಾಯತ ಮಹಾಸಭಾದ ಎಂ.ಎಸ್.ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




