ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನ ಮಾಡುತ್ತಿದ್ದೇವೆಂದು ಹೇಳಿ ಸಾರ್ವಜನಿಕರ ದಿಕ್ಕು ತಪ್ಪಿಸಿ, ಮಂಡ್ಯ ವಿವಿಯನ್ನು ಮುಚ್ಚುವ ಹುನ್ನಾರ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ವಿವಿ ಮುಚ್ಚುವ ಪ್ರಕ್ರಿಯೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಅವರು ಮುಚ್ಚಲು ಸಹಮತ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.
ಮಂಡ್ಯ ಜಿಲ್ಲೆಗೆ ವಿವಿ ಒದಗಿಸಿರುವುದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸದರಿ ವಿವಿಯನ್ನು ಆರ್ಥಿಕ ಹೊರೆಯ ನೆಪವೊಡ್ಡಿ ಮುಚ್ಚಲು ಮುಂದಾಗಿದೆ. ವಾಸ್ತವವಾಗಿ ಮೈಸೂರು ವಿವಿ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಖಾಯಂ ಉಪನ್ಯಾಸಕರ ನೇಮಕ ಹಾಗೂ ಹಾಲಿ ಉಪನ್ಯಾಸಕರಿಗೆ ವೇತನ ನೀಡಲು ಸಂಕಷ್ಟ ಎದುರಿಸುತ್ತಿದೆ, ಆದರೆ ಮಂಡ್ಯ ವಿವಿ ಪ್ರತಿಷ್ಠಿತ ಹೆಜ್ಜೆ ಇಡುತ್ತಿದ್ದು, ಹೆಜ್ಜೆ ತಪ್ಪಿದರೆ ಸರಿಪಡಿಸಬೇಕಾದ ಜನಪ್ರತಿನಿಧಿಗಳು ಇಲ್ಲವಾಗಿದ್ದಾರೆ ಎಂದರು.
ರೂಸ ಅನುದಾನಡಿ ಮಂಡ್ಯ ವಿವಿಗೆ ಬೇಕಾದ ಅಗತ್ಯ ಕಟ್ಟಡಗಳು ನಿರ್ಮಾಣವಾಗಿದ್ದು, 8 ಕಿ.ಮೀ ವ್ಯಾಪ್ತಿಯಲ್ಲಿ ೧೦೦ ಎಕರೆ ವಿಸ್ತೀರ್ಣ ಜಾಗವಿದೆ. ಅಗತ್ಯ ಕಟ್ಟಡಗಳಿವೆ. ವಿಜ್ಞಾನ ಬೋಧನೆಗೆ ಅನುಕೂಲಕರ ಪ್ರಯೋಗಾಲಯಗಳಿವೆ. ಅನುಕೂಲಕರ ಸೌಲಭ್ಯವಿದ್ದರೂ ವಿ.ವಿಯನ್ನು ಮುಚ್ಚುವ ನಿರ್ಧಾರವೇಕೆ ಎಂದು ಪ್ರಶ್ನಿಸಿದರು.
ಕರ್ನಾಟಕ ಸಂಘದ ಪ್ರೊ.ಜಯಪ್ರಕಾಶ್ಗೌಡ ಮಾತನಾಡಿ, ದಕ್ಷಿಣ ಭಾರತದಲ್ಲಿ ಮದರಾಸ್ ವಿವಿಯಿಂದ ಮೈಸೂರು ವಿವಿ ಹೊರಬಂದಾಗ ಇದೇ ರೀತಿಯಾದ ಅಪ ಪ್ರಚಾರ, ಅಂಜಿಕೆ, ಅಳುಕು ಇದ್ದವು. ಅಂತೆಯೇ ಮಂಡ್ಯ ವಿವಿಯು ಅತ್ಯುನ್ನತವಾಗಿ ಮುನ್ನಡೆಯಲಿದೆ ಎಂದು ಹೇಳಿದರು.
ಮಂಡ್ಯ ವಿವಿಯು ತನ್ನ ಛಾಪನ್ನು ಮೂಡಿಸಿದೆ. ಅಧಿಕಾರ ವಿಕೇಂದ್ರೀಕರಣ ಪ್ರಜಾಪ್ರಭುತ್ವದ ಮುಖ್ಯ ಲಕ್ಷಣ, ಅದನ್ನು ಕೇಂದ್ರೀಕರಣಗೊಳಿಸುತ್ತಿರುವ ಮನಸ್ಸುಗಳ ಬಗ್ಗೆ ನಮ್ಮ ತಿರಸ್ಕಾರವಿದ್ದು, ಈ ವಿಷಯದ ಬಗೆಗಿನ ವಾದಗಳು ಸಂವಾದವಾಗಿ ರೂಪುಗೊಂಡಾಗ ಮಾತ್ರ ತಾರ್ಕಿಕತೆಯನ್ನು ತಲುಪುತ್ತದೆ ಎಂದರು.
ಈ ನಡುವೆಯೂ ಮಂಡ್ಯ ಶಾಸಕ ರವಿಕುಮಾರ್ಗೌಡ ಮಂಡ್ಯ ವಿವಿಯನ್ನು ಉಳಿಸಿಕೊಳ್ಳಲು ದನಿಯೆತ್ತಿದ್ದು, ವಿವಿ ಸಂಬಂಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ. ವಿವಿಯ ಪ್ರವೇಶ ಕಮಾನಿಗೆ ೩ ಕೋಟಿ ರೂ ವೆಚ್ಚದಲ್ಲಿ ಗುದ್ದಲಿಪೂಜೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರೊ.ಜಿ.ಟಿ.ವೀರಪ್ಪ, ಪ್ರೊ.ಹುಲ್ಕೆರೆ ಮಹದೇವು, ಎಸ್.ಬಿ.ಶಂಕರೇಗೌಡ, ಕನ್ನಡ ಸೇನೆಯ ಮಂಜುನಾಥ್ ಹಾಗೂ ಎಸ್.ನಾರಾಯಣ್ ಉಪಸ್ಥಿತರಿದ್ದರು.




