Friday, November 20, 2026

ಪ್ರಾಯೋಗಿಕ ಆವೃತ್ತಿ

‘ಛತ್ರಿ’ ಎಂದರೆ ಉತ್ತಮ ನಿರ್ಧಾರ ತೆಗೆದುಕೊಳ್ಳುವವರು ಎಂದರ್ಥ ; ಡಿಕೆಶಿ ಹೇಳಿಕೆಗೆ ಉದಯ್ ಸರ್ಮಥನೆ

ವರದಿ: ಪ್ರಭು ವಿ ಎಸ್

‘ಛತ್ರಿ’ ಎಂದರೆ ಬಹಳ ಬುದ್ಧಿವಂತರು, ಬಹಳ ಪ್ರಬುದ್ಧರು ಹಾಗೂ ಎಂತಹದ್ದೇ ಸಂದರ್ಭದಲ್ಲೂ ಉತ್ತಮ ನಿರ್ಧಾರ ತೆಗೆದುಕೊಳ್ಳುವವರು ಎಂಬುದಾಗಿದ್ದು, ಡಿ.ಕೆ. ಶಿವಕುಮಾರ್ ಈ ದಾಟಿಯಲ್ಲಿ ಶಾರ್ಟಾಗಿ ಹೇಳಿದ್ದಾರೆ. ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಕೆ ಎಂ ಉದಯ್ ಸಮರ್ಥಿಸಿಕೊಂಡಿದ್ದಾರೆ.

ಮದ್ದೂರು ತಾಲೂಕಿನ ತಿಪ್ಪೂರು, ಕೆ.ಹಾಗಲಹಳ್ಳಿ, ಕಬ್ಬಾರೆ, ಅರುವನಹಳ್ಳಿ, ರಾಜೇಗೌಡನ ದೊಡ್ಡಿ ಹಾಗೂ ಕೆ.ಹೊನ್ನಲಗೆರೆ ಗ್ರಾಮಗಳಲ್ಲಿ ಸುಮಾರು 4 ಕೋಟಿ ರೂ. ರೂಪಾಯಿ ವೆಚ್ಚದ ರಸ್ತಸ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡ್ಯದವರು ಛತ್ರಿಗಳು ಎಂಬುದನ್ನು ಬಾಯಿ ತಪ್ಪಿ ಹೇಳಿದ್ದಾರೆ, ಇದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ. ಬಿಜೆಪಿಯವರು ಈ ವಿಷಯವನ್ನೇ ದೊಡ್ಡದಾಗಿ ಮಾಡಿಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ಅವರಿಗೆ ಯಾವುದೇ ರೀತಿಯ ಪ್ರಯೋಜನಗಳು ಆಗುವುದಿಲ್ಲ. ಡಿ.ಕೆ. ಶಿವಕುಮಾರ್ ಅವರು ಏನು ಎಂಬುವುದು ಮಂಡ್ಯ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ತಿಳಿಸಿದರು.

ಹೆಚ್.ಡಿ.ಕೆ ಅಕ್ರಮ ಜಮೀನು ವಾಪಸ್

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿರವರು ಅಕ್ರಮವಾಗಿ ವಶಪಡಿಸಿಕೊಂಡಿದ್ದ ಜಮೀನನ್ನ ಕಾನೂನು ಬದ್ಧವಾಗಿ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ, ಇದರಲ್ಲಿ ಯಾವುದೇ ರಾಜಕೀಯ ಅಥವಾ ದ್ವೇಷ ಇಲ್ಲ ಎಂದು ತಿಳಿಸಿದರು.

ಹಲವಾರು ವರ್ಷಗಳಿಂದ ಕುಮಾರಸ್ವಾಮಿ ಭೂ ಕಬಳಿಕೆ ವಿಷಯದ ಬಗ್ಗೆ ಚರ್ಚೆ ಆಗುತ್ತಿತ್ತು, ಆದರೆ ಈಗ ಕಾನೂನು ಪ್ರಕಾರವೇ ಅಧಿಕಾರಿಗಳು ಒತ್ತುವರಿ ತೆರವು ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರ ಬಳಿ ಜಮೀನಿಗೆ ಸಂಬಂಧಪಟ್ಟಂತ ಸೂಕ್ತ ದಾಖಲೆಗಳು ಇದ್ದರೆ ತೋರಿಸಲಿ, ಎರಡು ಬಾರಿ ಮುಖ್ಯಮಂತ್ರಿ ಆದವರ ಜಮೀನನ್ನ ಅಧಿಕಾರಿಗಳು ಅಷ್ಟು ಸುಲಭವಾಗಿ ಒತ್ತುವರಿ ಮಾಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಒತ್ತುವರಿ ಸಂಬಂಧ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ ಮಾಡಲಿ ಎಂದರು.

ಮದ್ದೂರು ತಾಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ ರಸ್ತೆಗಳು ಸರಿಯಿಲ್ಲದ ಪರಿಣಾಮ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡಲಾಗಿದ್ದು, ಇಲಾಖಾವಾರು ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು ಕ್ರಮ ಕೈಗೊಂಡಿದ್ದು, ಪ್ರತಿ ಹಳ್ಳಿಗಳಲ್ಲಿ ಒಂದಲ್ಲ ಒಂದು ರೀತಿಯ ಕಾಮಗಾರಿಗಳು ನಡೆಯಬೇಕು ಎಂಬ ಉದ್ದೇಶದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ಸರ್ಕಾರದಿಂದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಮನ್ ಮುಲ್ ನಿರ್ದೇಶಕ ಹರೀಶ ಬಾಬು, ತಾಪಂ‌ ಮಾಜಿ ಸದಸ್ಯ ಕೆ.ಆರ್.ಮಹೇಶ್, ಗ್ರಾಪಂ ಸದಸ್ಯರಾದ ರಾಘವೇಂದ್ರ, ಚಲುವರಾಜ್ ಮುಖಂಡರಾದ ಅಪ್ಪಾಜಿಗೌಡ, ಅಂಕಪ್ಪ, ಮುತ್ತುರಾಜು, ಚಿಕ್ಕಬಸವಯ್ಯ, ಹನುಮಂತ, ಚಿಕ್ಕಬಸವಯ್ಯ, ಪುಟ್ಟ, ಮುತ್ತುರಾಜು, ಕೃಷ್ಣ, ನಿಂಗಯ್ಯ, ಅಪ್ಪಾಜಿಗೌಡ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ