Friday, November 20, 2026

ಪ್ರಾಯೋಗಿಕ ಆವೃತ್ತಿ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಬೇಕೆನ್ನುವವರು ಜನರ ಕೆಲಸ ಮಾಡಿ : ರವಿಕುಮಾರ್

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವವರು ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರು ಅಥವಾ ನನ್ನ ಬಳಿ ಪ್ರದಕ್ಷಿಣಿ ಹಾಕುವ ಬದಲು ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಬೇಕು. ಜನ ಬೆಂಬಲವಿರುವವರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ಮಂಡ್ಯ ನಗರದ ಎ & ಎ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ‘ಸರ್ಕಾರದ ನಡಿಗೆ ಕಾರ್ಯಕರ್ತರ ಕಡೆಗೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ರಾಜಕಾರಣಕ್ಕೆ ಮುಂದಾಗಿವೆ, ಮೈತ್ರಿ ಸುಳಿವು ಅರ್ಥೈಸಿಕೊಂಡು ಉಭಯ ಪಕ್ಷಗಳ ಕಾರ್ಯಕರ್ತರನ್ನು ಪಕ್ಷದತ್ತ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದರು.

ನಮ್ಮನ್ನು ಚುನಾಯಿಸಿ ಅಧಿಕಾರ ನೀಡಿರುವ ನಿಷ್ಟ ಕಾರ್ಯಕರ್ತರು ಹಾಗೂ ಮತದಾರರ ಆದ್ಯತೆಗೆ ಎಂದಿಗೂ ಅಗ್ರಸ್ಥಾನ ನೀಡುತ್ತೇವೆ. ಆದರೆ ರಾಜಕೀಯ ಸ್ಥಿತ್ಯಂತರವನ್ನು ಅರ್ಥೈಸಿಕೊಂಡು ಮೈತ್ರಿ ಪಕ್ಷದ ಕಾರ್ಯಕರ್ತರನ್ನು ಸೆಳೆದು ಪಕ್ಷ ಬಲವರ್ಧನೆಗೊಳಿಸಬೇಕು. ಆ ಮೂಲಕ ಸ್ಥಳೀಯ ಸಂಸ್ಥೆಗಳಾದ ಜಿ.ಪಂ., ತಾ.ಪಂ ಹಾಗೂ ನಗರಸಭೆ ಗದ್ದುಗೆ ನಮ್ಮ ಪಕ್ಷದ ಪಾಲಾಗಲು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

ಅಭಿವೃದ್ದಿಗೆ 400 ಕೋಟಿ ಅನುದಾನ

ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ವಿವಿಧ ಇಲಾಖೆಗಳ ಅಡಿಯಲ್ಲಿ 400 ಕೋಟಿ ರೂ.ಗಳ ಅನುದಾನ ವ್ಯಯಿಸಲಾಗುತ್ತಿದೆ. ಕಳೆದ 75 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಅಭಿವೃದ್ದಿಗೆ ನನ್ನ ಅವಧಿಯಲ್ಲಿ ಚಾಲನೆ ನೀಡಲಾಗಿದೆ.

ಗೆಲುವಿನ ಹುಮ್ಮಸ್ಸಿನಿಂದ ಹೊರ ಬಂದು ಮತದಾರರ ಸಂಕಷ್ಟಕ್ಕೆ ಸ್ಪಂದಿಸಬೇಕು. ಎಂ.ಪಿ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಪ್ರತಿ ಮನೆ – ಮನೆಗೆ ತೆರಳಿ ಸರ್ಕಾರದ ಅಭಿವೃದ್ದಿ ಯೋಜನೆಯನ್ನು ಮತದಾರರಿಗೆ ಮುಟ್ಟಿಸಬೇಕು. ಆಗ ಪಕ್ಷ ಬಲವರ್ಧನೆ ಆಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ 5 ಜಿಲ್ಲೆಗಳ ರೈತರಿಗೆ ವರದಾನವಾಗಲಿರುವ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ನಮ್ಮ ಸರ್ಕಾರ ಬದ್ದತೆ ಮೆರೆದಿದೆ. ಅದೇ ರೀತಿ ಜಿಲ್ಲೆಯ ನಾಲೆಗಳ ಆಧುನೀಕರಣಕ್ಕೆ 780 ಕೋಟಿ ರೂಪಾಯಿಗಳನ್ನು ಪ್ರಸಕ್ತ ಸಾಲಿನಲ್ಲಿ ವ್ಯಯಿಸಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಬಹುಪಾಲು ಜನರಿಗೆ ನೆರವಾಗಿವೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ