ಮಾಧ್ಯಮಗಳು ಕೆಟ್ಟ ವಿಚಾರಗಳನ್ನು ಬಿಂಬಿಸಿ ಜನರಿಗೆ ತಲುಪಿಸುವ ಬದಲು ಒಳಿತನ್ನು ಸಮಾಜಕ್ಕೆ ತಲುಪಿಸುವ ಕಾರ್ಯವನ್ನು ಹೆಚ್ಚಾಗಿ ಮಾಡಬೇಕಿದೆ ಎಂದು ಖ್ಯಾತ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ನಾಗಮಂಗಲ ತಾಲೂಕಿನ ನಾಗತಿಹಳ್ಳಿಯಲ್ಲಿ ಜರುಗುತ್ತಿರುವ 21ನೇ ಸಂಸ್ಕೃತಿ ಹಬ್ಬ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಆರೋಗ್ಯದ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಗತಿಹಳ್ಳಿಯಲ್ಲಿ ಪ್ರತಿ ವರ್ಷ ಅರ್ಥವತ್ತಾಗಿ ನೆಡೆಯುವ ಸಂಸ್ಕೃತಿ ಹಬ್ಬವು ಕೇವಲ ಮಂಡ್ಯ ಜಿಲ್ಲೆಗಷ್ಟೇ ಅಲ್ಲದೆ ನಾಡಿಗೆ ಕೀರ್ತಿ ತರುವಂತದ್ದಾಗಿದ್ದು ಇಂತಹ ವಿಚಾರಗಳನ್ನು ಮಾಧ್ಯಮಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸುದ್ದಿ ಮಾಡಬೇಕಿದೆ. ಕೆಟ್ಟ ಸುದ್ದಿಗಳಿಗೆ ಸಿಗುವ ಪ್ರಚಾರ ಇಂತಹ ಒಳ್ಳೆಯ ಕಾರ್ಯಗಳಿಗೆ ಸಿಗದಿರುವುದೇ ವಿಪರ್ಯಾಸವೆಂದು ತಿಳಿಸಿದರು.
ಗ್ರಾಮೀಣ ಬದುಕನ್ನು ತೊರೆದು ನಗರ ವಾಸಿಗಳಾಗುವ ಧಾವಂತದಲ್ಲಿರುವ ಯುವ ಪೀಳಿಗೆಯು ನಾಗತಿಹಳ್ಳಿ ಚಂದ್ರಶೇಖರ್ ರವರ ದಾರಿಯಲ್ಲಿ ಸಾಗಬೇಕಿದೆ. ದೇಶ ವಿದೇಶಗಳಲ್ಲಿ ನೆಲೆಸುವ ಅವಕಾಶ ಶಕ್ತಿ ಅರ್ಹತೆ ಎಲ್ಲವೂ ಇರುವ ಇವರು ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಯ ಅಭಿವೃದ್ಧಿ. ಅಭಿವ್ಯಕ್ತಿ ಸಂಘ ಹಾಗೂ ಬ್ಯಾಂಕ್ ಸ್ಥಾಪನೆಗೆ ನೆರವು.ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆ. ತಮ್ಮೂರಿನ ಉದಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹ ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ಈ ಊರಿನ ಜನರಿಗೆ ಗ್ರಂಥಾಲಯ ವ್ಯವಸ್ಥೆ, ಗಣಕಯಂತ್ರಾಧಾರಿತ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಸೇರಿದಂತೆ 21 ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ,ಗ್ರಾಮೀಣ ಬದುಕಿಗೆ ಚೈತನ್ಯ ತುಂಬುವ ಕಾರ್ಯ ಹಾಗೂ ನಾಡಿನ ಶ್ರೇಷ್ಠ ಸಾಹಿತಿಗಳ ಉಪನ್ಯಾಸ ಮಾಲಿಕೆಗಳನ್ನು ಚಂದ್ರಶೇಖರ್ ತಲುಪಿಸುತ್ತಾ ಬಂದಿದ್ದಾರೆ . ಇಂತಹ ಕಾರ್ಯಗಳನ್ನು ಶ್ರೀಮಂತ ರಾಜಕಾರಣಿಗಳು, ಉದ್ಯಮಿಗಳು ಅನುಸರಿಸಿದರೆ ಪ್ರತಿ ಹಳ್ಳಿಯ ಉದ್ದಾರ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಟ್ಟೆ ಪುರಾಣ ಖ್ಯಾತಿಯ ಅಂಕಣಕಾರ ಬಿ.ಚಂದ್ರೇಗೌಡ ತಾವು ಓದಿದ ಶಾಲೆಯಲ್ಲಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಒಂದು ಲಕ್ಷ ರೂಪಾಯಿ ನೆರವು ನೀಡಿದ ಸಮಾಜಸೇವಕ ಲಯನ್ ದೇವೇಗೌಡರವರನ್ನು ಅಭಿನಂದಿಸಲಾಯಿತು.
ವೇದಿಕೆ ಕಾರ್ಯಕ್ರಮದ ನಂತರ ಯುವ ನಿರ್ದೇಶಕಿ ಯಶಸ್ವಿ ನಾಗತಿಹಳ್ಳಿ ನಿರ್ದೇಶನದ ಆತ್ಮಾವಲೋಕನ ನಾಟಕ ಪ್ರಸ್ತುತ ಪಡಿಸಲಾಯಿತು. ಪೋಷಕರು ತಮ್ಮ ಇಚ್ಛೆಯಂತೆಯೇ ತಮ್ಮ ಮಕ್ಕಳು ಬೆಳೆಯಬೇಕೆಂಬ ಹಠಕ್ಕೆ ಬಿದ್ದು ಮಕ್ಕಳ ಕನಸುಗಳನ್ನು ಕಮರುವಂತೆ ಮಾಡಿ ಮುಂದೆ ಇಡೀ ಕುಟುಂಬವೇ ಅಶಾಂತವಾಗಿ ಬಾಳುವ ಹಂತಕ್ಕೆ ತಲುಪುತ್ತದೆ. ಆಗ ದಿಕ್ಕು ತೋಚದ ಮಕ್ಕಳು ಸಾವಿನ ಕುಣಿಕೆಗೆ ಮುತ್ತನಿಡಲು ಮುಂದಾಗುವ ಬದಲು ತಮ್ಮ ಆಯ್ಕೆಯ ಕಾರ್ಯವನ್ನು ಈಡೇರಿಸಲು ಪ್ರಯತ್ನಿಸಿ ಯಶಸ್ಸು ಗಳಿಸಬಹುದೆಂಬುದನ್ನು ನೆರೆದಿದ್ದ ಪ್ರೇಕ್ಷಕರು ಅಚ್ಚರಿ ಪಡುವಂತೆ ಅಭಿವ್ಯಕ್ತಿ ಸಂಘದ ಸದಸ್ಯರು ನಾಟಕದ ಮೂಲಕ ಮನೋಜ್ಞವಾಗಿ ಅಭಿನಯಿಸಿದರು.
ನಾಗತಿಹಳ್ಳಿ ಚಂದ್ರಶೇಖರ್,ಯಶಸ್ವಿ ನಾಗತಿಹಳ್ಳಿ ಹಾಗೂ ಚಾಮಲಾಪುರ ಗೋವಿಂದರಾಜು ಇತರರಿದ್ದರು.




