ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಹೊರಗುತ್ತಿಗೆ ಉದ್ಯೋಗಿಗಳಿಗೆ ಪ್ರತಿ ತಿಂಗಳು 5 ರೊಳಗೆ ಸಂಬಳವನ್ನು ಕಡ್ಡಾಯವಾಗಿ ನೀಡಬೇಕು. ತಡವಾದಲ್ಲಿ ಏಜೆನ್ಸಿಗಳ ವಿರುದ್ಧ ಕ್ರಮಕೈಗೊಂಡು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಮಂಡ್ಯ (ಮಾ. 28) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳ ಉದ್ಯೋಗಿಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿರುವ ಹಾಸ್ಟಲ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಎಜೆನ್ಸಿಗಳು ಪ್ರತಿ ತಿಂಗಳು ಸಂಬಳವನ್ನು ಸರಿಯಾಗಿ ನೀಡುತ್ತಿರುವ ಬಗ್ಗೆ ಅಧಿಕಾರಿಗಳು ಖಾತ್ರಿ ಪಡಿಸಿಕೊಂಡು ನಂತರ ಏಜೆನ್ಸಿಗಳಿಗೆ ಬಿಲ್ ಪಾವತಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಉದ್ಯೋಗಿಗಳಿಗೆ ಹೆಲ್ತ್ ಇನ್ಶುರೆನ್ಸ್ ಕಡ್ಡಾಯ ಹಾಸ್ಟಲ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಹೆಲ್ತ್ ಇನ್ಶೂರೆನ್ಸ್ ಮಾಡಿಸಲು ಕ್ರಮಕೈಗೊಳ್ಳಿ ಅದರ ಜೊತೆಗೆ ವೇತನ ಪಾವತಿಯ ನಂತರ ಪೇ ಸ್ಲಿಪ್,, ಇ.ಎಸ್.ಐ ಮತ್ತು ಪಿ.ಎಫ್ ಹಣ ಎಲ್ಲವನ್ನು ಕಲ್ಪಿಸಬೇಕು ಎಂದು ಹೇಳಿದರು.
ಇ, ಎಸ್, ಐ ಮತ್ತು ಪಿ, ಎಫ್ ಹಣವನ್ನು ಪ್ರತಿ ತಿಂಗಳು ನೀಡುತ್ತಿರುವ ಬಗ್ಗೆ ಏಜೆನ್ಸಿ ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಸಂಬಳ ನೀಡಿದ ತಕ್ಷಣವೇ ಸಿಬ್ಬಂದಿಗಳಿಗೆ ಪೇ ಸ್ಲಿಪ್ ನೀಡುವುದು ಸಹ ಕಡ್ಡಾಯ ಎಂದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಸಿದ್ಧಲಿಂಗೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಮಂಜುಳಾ ಹಾಗೂ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಧುಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




