Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರಾಭಿವೃದ್ಧಿಗೆ 200 ಕೋಟಿ ರೂ. ಅನುದಾನ – ರವಿಕುಮಾರ್

ಮಂಡ್ಯ ನಗರಸಭೆ ವ್ಯಾಪ್ತಿಯ 35 ವಾರ್ಡ್ ಗಳ ಸಮಗ್ರ ಅಭಿವೃದ್ದಿಗೆ ಸುಮಾರು 200 ಕೋಟಿ ರೂ.ಗಳ ಅನುದಾನ ಬಳಕೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಂಡ್ಯನಗರ ಸುಸಜ್ಜಿತ ನಗರವಾಗಿ ಹೊರ ಹೊಮ್ಮಲಿದೆ ಎಂದು ಶಾಸಕ ಪಿ.ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಮಹಾವೀರ ವೃತ್ತ ಹಾಗೂ ಹೊಸಹಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆ ಅಭಿವೃದ್ದಿಗೆ ನಗರದ ಹೊಸಹಳ್ಳಿಯ ಗುರುಮಠ ಸಮೀಪ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ ಕೇಂದ್ರವಾಗಿರುವ ಮಂಡ್ಯನಗರ ನಿರೀಕ್ಷಿತ ಅಭಿವೃದ್ದಿ ಕಂಡಿಲ್ಲ, ನಗರ ವ್ಯಾಪ್ತಿಯಲ್ಲಿ ಹಾದು ಹೋಗುವ ಪ್ರಮುಖ ರಸ್ತೆಗಳು ತೀರಾ ಹದಗೆಟ್ಟ ಸ್ಥಿತಿಯಲ್ಲಿವೆ, ಅವುಗಳ ಅಭಿವೃದ್ದಿಗೆ ಕ್ರಮ ವಹಿಸಲಾಗಿದ್ದು, ನಗರ ವ್ಯಾಪ್ತಿಯಲ್ಲಿ ಹಲವು ಸಾರ್ವಜನಿಕ ಸ್ನೇಹಿ ಯೋಜನೆಗಳು ಕಾರ್ಯಗತಗೊಳ್ಳಲಿದ್ದು, ನಗರದ ಚಿತ್ರಣ ಬದಲಾಗಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪ್ರಮುಖ ರಸ್ತೆಗಳ ಆಧುನೀಕರಣ ಹಾಗೂ ಚರಂಡಿ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದ್ದು, 9 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸಹಳ್ಳಿ ಸಂಪರ್ಕ ರಸ್ತೆ ಮತ್ತು ಹೊಳಲು ವೃತ್ತದ ಸಂಪರ್ಕ ರಸ್ತೆ ಅಭಿವೃದ್ದಿಪಡಿಸಿ ಅತ್ಯಾಧುನಿಕ ರೀತಿಯ ವಿದ್ಯುತ್ ದೀಪ ಅಳವಡಿಕೆ, ಫುಟ್ ಪಾತ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

800 ಮೀಟರ್ ವ್ಯಾಪ್ತಿಯ ಮಹಾವೀರ ವೃತ್ತ – ಹೊಸಹಳ್ಳಿ ಬಿಸಿಲು ಮಾರಮ್ಮ ದೇವಾಲಯ ವೃತ್ತ ಸಂಪರ್ಕಿಸುವ ಪ್ರಮುಖ ರಸ್ತೆಯ ಉನ್ನತ್ತೀಕರಣಕ್ಕೆ ಡೆಲ್ಟಾ ಮತ್ತು ನಗರಸಭೆ ಸಹಯೋಗದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ವೃತ್ತಗಳ ಸೌಂದರ್ಯಿಕರಣ ಮತ್ತು ಪುಟ್ ಪಾತ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.

ತೀರಾ ದುಸ್ಥಿತಿಯಲ್ಲಿದ್ದ ರೈಲ್ವೇ ಸೇತುವೆಯನ್ನು 38 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದ್ದು, ಮೂರು ಕೋಟಿ ರೂ. ವೆಚ್ಚದಲ್ಲಿ ಕನ್ನಿಕ ಪರಮೇಶ್ವರಿ ದೇವಾಲಯ ವೃತ್ತ – ಚಾಂಮುಂಡೇಶ್ವರಿ ದೇವಾಲಯ ವೃತ್ತದ ರಸ್ತೆ ಅಭಿವೃದ್ದಿ ಕೈಗೆತ್ತಿಕೊಳ್ಳಲಾಗಿದ್ದು, 2ನೇ ಹಂತದಲ್ಲಿ ಸುಮಾರು ಆರೂವರೆ ಕೋಟಿ ರೂ.ವೆಚ್ಚದಲ್ಲಿ ಗೌರಿ ಶಂಕರ ಸಮುದಾಯ ಭವನದ ಹೊರಗಿನ ರಸ್ತೆ ಅಭಿವೃದ್ದಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

3ನೇ ವಾರ್ಡ್ ಗೆ 10 ಕೋಟಿ ರೂ.

3ನೇ ವಾರ್ಡ್ ನಿವಾಸಿಗಳಿಗೆ ಮಳೆಗಾಲದಲ್ಲಿ ಉಂಟಾಗುತ್ತಿದ್ದ ಅತೀವೃಷ್ಠಿ ತಡೆಗೆ ಕ್ರಮ ವಹಿಸಲಾಗಿದ್ದು, 10 ಕೋಟಿ ವಿಶೇಷ ಅನುದಾನದಲ್ಲಿ ವಾರ್ಡ್ ನ ಸಮಗ್ರ ಅಭಿವೃದ್ದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಮುಖ್ಯರಸ್ತೆಗಳಿಗೆ ಹೈಟೆಕ್ ನಾಮಫಲಕ ಅಳವಡಿಕೆ, ಕಲ್ಲಹಳ್ಳಿ ಸ್ಮಶಾನದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವಿದ್ಯುತ್ ಚಿತಾಗಾರ ನಿರ್ಮಾಣ ಮತ್ತು ಕೆರೆ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದರು.

11 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ವಿ.ವಿ.ನಗರ ಮತ್ತು ಗುತ್ತಲು ಸಮೀಪದ ಮಳೆ ನೀರು ಚರಂಡಿಗಳ ಉನ್ನತೀಕರಣಕ್ಕೆ ಕ್ರಮ ವಹಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್, ಉಪಾಧ್ಯಕ್ಷ ಅರುಣ್ ಕುಮಾರ್, ಮಾಜಿ ಅಧ್ಯಕ್ಷ  ಹೆಚ್.ಎಸ್.ಮಂಜು, ಸದಸ್ಯೆ ಪವಿತ್ರ ಬೋರೇಗೌಡ, ಪೌರಾಯುಕ್ತೆ ಪಂಪಾಶ್ರೀ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ರುದ್ರಪ್ಪ, ಹೊಸಹಳ್ಳಿ ನಾಗೇಶ್, ಟೆಕ್ನಿಕ್ ಮಂಜು, ಜೆ.ಕೆ.ಶ್ರೀಕಾಂತ್,  ಸೇರಿದಂತೆ ಹಲವು ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ