Tuesday, November 24, 2026

ಪ್ರಾಯೋಗಿಕ ಆವೃತ್ತಿ

ಹೆಚ್.ಡಿ.ಕುಮಾರಸ್ವಾಮಿ ಬೆನ್ನಿಗೆ ಬಿಜೆಪಿ ಚೂರಿ : ರವಿಕುಮಾರ್ ಆರೋಪ

ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ಶಕ್ತಿಯನ್ನು ಬಳಸಿಕೊಂಡ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ 12 ಸಂಸದ ಸ್ಥಾನಗಳನ್ನು ಗೆದ್ದಿತು. ಕುಮಾರಸ್ವಾಮಿ ಶಕ್ತಿ ಹೀರಿಕೊಂಡ ಬಿಜೆಪಿ ಚುನಾವಣೆ ನಂತರ ಅವರ ಬೆನ್ನಿಗೆ ಚೂರಿ ಹಾಕಿದೆ ಎಂದು ಶಾಸಕ ಪಿ.ರವಿ ಕುಮಾರ್ ಗಣಿಗ ಆರೋಪಿಸಿದರು.

ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಕೊಂಡೋತ್ಸವದ ಅಂಗವಾಗಿ 1.85 ಕೋಟಿ ರೂ.ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಶಕ್ತಿ ಬಳಸಿಕೊಂಡು ಬಿಜೆಪಿ ಪ್ರಚಾರ ಮಾಡಿದ್ದರಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ 12 ಸ್ಥಾನಗಳನ್ನು ಗಳಿಸಿತು.ಈ ಬಗ್ಗೆ ಬಿಜೆಪಿ ಸಂಸದರೇ ನಮ್ಮ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಐದಾರು ಬಾರಿ ಬಂದಿದ್ದರಿಂದ ನಾವೆಲ್ಲ ಗೆಲುವು ಸಾಧಿಸಿದೆವು ಎಂದು ನನ್ನ ಬಳಿ ಹೇಳಿದ್ದರು. ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಶಕ್ತಿಯನ್ನು ಹೀರಿಕೊಂಡ ಬಿಜೆಪಿ ಅವರನ್ನು ಒಬ್ಬಂಟಿ ಮಾಡಿ ಬೀದಿಗೆ ತಂದು ಈಗ ಜನಾಕ್ರೋಶ ಎಂದು ಹೊರಟಿದ್ದಾರೆ. ಕುಮಾರಸ್ವಾಮಿಯವರ ಬೆನ್ನಿಗೆ ಬಿಜೆಪಿ ಚೂರಿ ಹಾಕಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ ಖತಂ ಆಗಲಿದೆ ಎಂದರು.

ಮೋದಿ ವಿರುದ್ಧ ಪ್ರತಿಭಟಿಸಲಿ

ಬಿಜೆಪಿ ನಾಯಕರು ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ ರ‌್ಯಾಲಿ ಮಾಡುವ ಬದಲು ಪೆಟ್ರೋಲ್- ಡೀಸೆಲ್ ಬೆಲೆ 2 ರೂ ಹೆಚ್ಚಿಸಿರುವ ಹಾಗೂ ಸಿಲಿಂಡರ್ ಬೆಲೆ 50ರೂ.ಹೆಚ್ಚಳ ಮಾಡಿರುವ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮೊದಲು ಪ್ರತಿಭಟನೆ ಮಾಡಲಿ. ಗ್ಯಾಸ್ ಬೆಲೆ ಹೆಚ್ಚಳಕ್ಕಾಗಿ ಬೀದಿಯಲ್ಲಿ ಮಹಿಳೆಯರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದು,ಮೊದಲು ಗ್ಯಾಸ್ ದರ ಇಳಿಸಲು ಮೋದಿಯವರನ್ನು ಒತ್ತಾಯಿಸಿ ನಂತರ ಪ್ರತಿಭಟನೆ ನಡೆಸಲಿ ಎಂದು ವ್ಯಂಗ್ಯವಾಡಿದರು.

2.60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

ಆಲಕೆರೆ ಶ್ರೀ ವೀರಭದ್ರೇಶ್ವರ ಸ್ವಾಮಿ ಕೊಂಡೋತ್ಸವ 25 ವರ್ಷಗಳ ನಂತರ ನಡೆಯುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಎತ್ತರದ ಕೊಂಡ ನೋಡಲು ರಾಜ್ಯಾದ್ಯಂತ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ. ಮೇ 5,6, 7,8ರಂದು ಕೊಂಡೋತ್ಸವ ನಡೆಯುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಅರಕೆರೆ- ಕೀಲಾರ ರಸ್ತೆಯನ್ನು ಒಂದು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಆಲಕೆರೆ ಗ್ರಾಮದ ಒಳಭಾಗದ ರಸ್ತೆಗಳ ಅಭಿವೃದ್ಧಿಗೆ 80 ಲಕ್ಷ ಹಾಗೂ ಶಾಲಾ ಅಭಿವೃದ್ಧಿಗೆ 5 ಲಕ್ಷ ಸೇರಿ ಒಟ್ಟು 1.85 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಳೆದ ವಾರ 50 ಲಕ್ಷ ರೂ ವೆಚ್ಚದ ಕಾಮಗಾರಿ ಮುಗಿದಿದ್ದು, ಒಟ್ಟು 75 ಲಕ್ಷ ಈ ಹಿಂದೆ ಬಿಡುಗಡೆಯಾಗಿತ್ತು.ಈಗ 1.85 ಕೋಟಿ ಸೇರಿ ಒಟ್ಟಾರೆ 2.60 ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಆಲಕೆರೆ ಗ್ರಾಮದಲ್ಲಿ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ರುದ್ರೇಗೌಡ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ