ಮಂಡ್ಯ ನಗರಸಭೆ ಎಷ್ಟು ನಿದ್ರಾವಸ್ಥೆಯಲ್ಲಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾಗಿಲ್ಲ. ಕಣ್ಣ ಮುಂದೆಯೇ ಅಕ್ರಮ ನಡೆಯುತ್ತಿದ್ದರೂ ಕಾಣದಂತೆ ಜಾಣಮೌನ ವಹಿಸಿದೆ. ನೀವು ಏನೇ ಮಾಡಿ, ಆಸ್ತಿಯನ್ನು ಒತ್ತುವರಿ ಮಾಡಿ, ಉದ್ಯಾನವನಗಳನ್ನು ವಾಹನಗಳ ಪಾರ್ಕಿಂಗ್ ಸ್ಥಳ ಮಾಡಿಕೊಳ್ಳಿ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ.
ಹೌದು, ಮೇಲಿನ ಎಲ್ಲಾ ವಾಕ್ಯಗಳು ಮಂಡ್ಯ ನಗರಸಭೆ ವಿಚಾರದಲ್ಲಿ ಸತ್ಯವಾಗಿದೆ. ಯಾಕೆಂದರೆ ನಗರಸಭೆ ಎದುರಿರುವ ಮಹಾತ್ಮಗಾಂಧಿ ಉದ್ಯಾನವನ ಇಂದು ಕಾರು, ಬೈಕ್‌ಗಳ ನಿಲ್ದಾಣವಾಗಿದೆ. ಕಣ್ಣ ಮುಂದೆಯೇ ಅವೈಜ್ಞಾನಿಕವಾಗಿ, ಕಾನೂನು ಬಾಹಿರವಾಗಿ ವಾಹನ ಮಾಲೀಕರು ವಾಹನಗಳನ್ನು ಉದ್ಯಾನವನದ ಒಳಗೆ ನಿಲ್ಲಿಸುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದೆ ನಗರಸಭೆ ಆಡಳಿತ.
ನಗರಸಭೆ ಕಟ್ಟಡದಿಂದ ಹೊರಗೆ ನಿಂತರೆ ಸಾಕು, ಈ ಗಾಂಧಿ ಪಾರ್ಕ್ ಕಣ್ಣಮುಂದೆ ನಿಲ್ಲುತ್ತದೆ. ಒಂದು ಕಾಲದಲ್ಲಿ ಮಕ್ಕಳ ನೆಚ್ಚಿನ ಪಾರ್ಕ್. ಉದ್ಯಾನವನದ ಒಳಗೆ ಬರಬೇಕಾದರೆ ಶುಲ್ಕವನ್ನು ಪಾವತಿ ಮಾಡಿ ಜನರು, ಮಕ್ಕಳು ಬರುತ್ತಿದ್ದರು. ಕಾರಂಜಿ, ದೀಪದ ವ್ಯವಸ್ಥೆ ಎಲ್ಲವೂ ಸುಸಜ್ಜಿತವಾಗಿತ್ತು. ಆದರೆ ನಗರಸಭೆಯ ನಿರ್ಲಕ್ಷ್ಯದಿಂದ ಇಂದು ವಾಹನ ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿದೆ.
ನಗರಸಭೆಯಲ್ಲಿ ಉದ್ಯಾನವನ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಪಾರ್ಕ್ ಇನ್ಸ್ಪೆಕ್ಟರ್ ಎಂಬ ಹುದ್ದೆಯೂ ಇದೆ. ಈ ಹುದ್ದೆಗೆ ಖಾಯಂ ನೌಕರ ಇಲ್ಲದೇ ಇದ್ದರೂ, ಓರ್ವ ನೌಕರನನ್ನು ಪ್ರಭಾರವಾಗಿ ನೇಮಕ ಮಾಡಲಾಗಿದೆ. ಆದರೆ ಅವರು ಮಾಡುತ್ತಿರುವುದಾದರೂ ಏನು ಎಂಬ ಪ್ರಶ್ನೆ ಎದ್ದಿದೆ. ಪ್ರತಿ ನಿತ್ಯ ಸುಸಜ್ಜಿತವಾದ ಉದ್ಯಾನವನದಲ್ಲಿ, ಅದರಲ್ಲೂ ನಗರಸಭೆ ಎದುರೇ ವಾಹನ ನಿಲ್ಲಿಸುತ್ತಿದ್ದಾರೆ ಎಂದರೆ, ಉಳಿದ ಪಾರ್ಕುಗಳ ಕಥೆ ಏನು ಎಂಬ ಪ್ರಶ್ನೆಯನ್ನು ನಾಗರಿಕರು ಎತ್ತಿದ್ದಾರೆ.
ಒಂದು ಕಡೆ ಉದ್ಯಾನವನಗಳಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಇದು ಪರಿಸರ ಪ್ರಿಯರ ವಿರೋಧಕ್ಕೆ ಕಾರಣವಾಗಿದೆ. ಆದರೂ ನಗರಸಭೆ ಆಡಳಿತ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ತಡೆ ನೀಡುವ ಇರಾದೆಗೆ ಹೋಗಿಯೇ ಇಲ್ಲ. ಇತ್ತ ಬೆಂಗಳೂರು, ಮೈಸೂರು ಹೋಗುವ ರೈಲ್ವೆ ಪ್ರಯಾಣಿಕರು ತಮ್ಮ ವಾಹನಗಳನ್ನು ಅನಧಿಕೃತವಾಗಿ ಗಾಂಧಿ ಉದ್ಯಾನವನದಲ್ಲಿ ನಿಲ್ಲಿಸುತ್ತಿದ್ದರೂ ಗಮನವನ್ನು ನಗರಸಭೆ ಹರಿಸಿಲ್ಲ.
ಕಣ್ಣ ಮುಂದೆಯೇ ಇಷ್ಟೊಂದು ಅವ್ಯವಸ್ಥೆ ಇದ್ದರೂ, ಅನಧಿಕೃತವಾಗಿ ವಾಹನ ನಿಲ್ದಾಣ ಮಾಡಿಕೊಂಡಿದ್ದರೂ, ಈ ನಗರಸಭೆ ಅಧಿಕಾರಿಗಳು ಸಾರ್ವಜನಿಕ ಆಸ್ತಿಯನ್ನು ಉಳಿಸುತ್ತಾರೆಯೇ ಎಂಬ ಅನುಮಾನ ಮೂಡುತ್ತಿದೆ. ಇಂತಹ ಅಧಿಕಾರಿಗಳ ನೇಮಕ ಮಂಡ್ಯ ಗಬ್ಬೆದ್ದು ನಾರಲು ಕಾರಣವಾಗಿದೆ ಎಂದು ಕರವೇ (ಶಿವರಾಮೇಗೌಡ ಬಣದ) ಜಿಲ್ಲಾಧ್ಯಕ್ಷ ಹೆಚ್.ಡಿ ಜಯರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.




