Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪಹಲ್ಗಾಮ್ ಭಯೋತ್ಪಾದನಾ ದಾಳಿ ಖಂಡಿಸಿ ಪ್ರತಿರೋಧ ಪ್ರತಿಭಟನೆ

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿರುವ ಗುಂಡಿನ ದಾಳಿಯ ಹೇಯ ಹಾಗೂ ಪೈಶಾಚಿಕ ಕೃತ್ಯವನ್ನು ಖಂಡಿಸಿ ಮಾನವೀಯ ಮೌಲ್ಯವುಳ್ಳ ದೇಶಭಕ್ತರ ಬಳಗದಿಂದ ಬುಧವಾರ ಸಂಜೆ ಮಂಡ್ಯನಗರದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಭಯೋತ್ಪಾದಕರ ಈ ಪೈಶಾಚಿಕ ಕೃತ್ಯವನ್ನು ಖಂಡಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.

ಮುಗ್ಧರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿರುವ ದಾಳಿ ಮಾನವೀಯತೆಯ ಮೇಲೆ ನಡೆದಿರುವ ದಾಳಿಯಾಗಿದೆ. ಈ ದಾಳಿಗೆ ಕಾರಣರಾದ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಜನರು ಜಾತಿ-ಧರ್ಮವೆನ್ನದೆ ಎಲ್ಲರೂ ಒಟ್ಟಾಗಿ ನಿಲ್ಲುವುದು ಅತ್ಯಂತ ಅಗತ್ಯವಾಗಿದೆ. ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ರಕ್ಷಣೆಗಾಗಿ ಧಾವಿಸಿ ಭಯೋತ್ಪಾದಕರಿಂದ ರೈಫಲ್ ಕಸಿದುಕೊಳ್ಳಲು ಯತ್ನಿಸಿದ ಕಾಶ್ಮೀರದ ಕುದುರೆ ಸವಾರ ಸವಾರ ಸಯ್ಯದ್ ಆದಿಲ್ ಹುಸೇನ್ ಷಾ ಅವರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಸ್ಮರಿಸಿದರು.

ಮೂವರನ್ನು ರಕ್ಷಣೆ ಮಾಡಿದ ಮುಸಲ್ಮಾನರು

ಉಗ್ರರ ದಾಳಿಯಲ್ಲಿ ಹತ್ಯೆಗೀಡಾದ ಶಿವಮೊಗ್ಗದ ಮಂಜುನಾಥ್ ಅವರ ಪತ್ನಿ ಪಲ್ಲವಿ ಅವರು ಹೇಳಿಕೆಯಲ್ಲಿ ನನ್ನ ಹಾಗೂ ನನ್ನ ಮಗನನ್ನು ರಕ್ಷಣೆ ಮಾಡಿದವರು ಕೂಡ ಮೂವರು ಮುಸಲ್ಮಾನರು. ಅವರು ನನ್ನ ಅಣ್ಣಂದಿರಂತೆ ಎಂದು ಹೇಳಿದ್ದಾರೆ. ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಇಲ್ಲಿ ಭಯೋತ್ಪಾದಕರನ್ನು ಖಂಡಿಸಬೇಕೇ ವಿನಃ ಯಾವುದೋ ಒಂದು ನಿರ್ದಿಷ್ಟ ಧರ್ಮವನ್ನಲ್ಲ. ಹಾಗೆ ಕುತಂತ್ರ ರಾಜಕೀಯ ಮಾಡುವವರನ್ನು ಕೂಡ ಮಾನವೀಯ ಮೌಲ್ಯವುಳ್ಳ ಪ್ರತಿಯೊಬ್ಬರು ವಿರೋಧಿಸಲೇಬೇಕಿದೆ ಎಂದರು.

ಕೋಮು ಭಾವನೆ ಕೆರಳಿಸಲು ಯತ್ನ

ಕೆಲವು ಮಾಧ್ಯಮಗಳು ಈ ದಾಳಿಯ ವಿಷಯದಲ್ಲಿ ಕೋಮು ಭಾವನೆಗಳನ್ನು ಕೆರಳಿಸಲು ಮುಂದಾಗಿರುವುದು ಸರಿಯಲ್ಲ. ಕೆಲವು ಮಾಧ್ಯಮಗಳು ಹಿಂದೂ-ಮುಸ್ಲಿಂ ಎಂದು ಹೇಳುತ್ತಾ ಪ್ರಚೋದನೆಗೆ ಒಳಗಾಗುವ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಸಂತ್ರಸ್ತರ ಹೇಳಿಕೆಗಳನ್ನೇ ತಿರುಚುತ್ತಿವೆ. ಉಗ್ರರ ದಾಳಿಯಲ್ಲಿ ಹತ್ಯೆಯಾದ ಶಿವಮೊಗ್ಗದ ಮಂಜುನಾಥರವರ ಪತ್ನಿ ಪಲ್ಲವಿಯವರು ಮೂರು ಮುಸಲ್ಮಾನರು ನಮ್ಮನ್ನು ಬಿಸ್ಮಿಲ್ಲಾ, ಬಿಸ್ಮಿಲ್ಲಾ ಎಂದು ಹೇಳುತ್ತಾ ರಕ್ಷಣೆ ಮಾಡಿದರು ಎಂದು ಹೇಳಿದರೆ, ಅದನ್ನು ಬಿಸ್ಮಿಲ್ಲಾ ಬಿಸ್ಮಿಲ್ಲಾ ಎಂದು ಹೇಳುತ್ತಾ ಹತ್ಯೆ ಮಾಡಿದರು ಎಂಬುದಾಗಿ ಸುಳ್ಳುಗಳನ್ನೇ ಬಿತ್ತರಿಸಿ ಆ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವುದು ಕೂಡ ಖಂಡನೀಯ. ಮಾಧ್ಯಮಗಳು ಈ ಪೈಶಾಚಿಕ ಘಟನೆಯನ್ನು ಖಂಡಿಸುವ ಮೂಲಕ, ಈ ಘಟನೆಗಳಿಗೆ ಕಾರಣ ಏನೆಂಬುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಬೇಕಿದೆ ಎಂದರು.

ಭದ್ರತಾ ವೈಫಲ್ಯ

2019ರಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ಬಾಂಬ್ ಸ್ಫೋಟದಲ್ಲಿ 40 ಮಂದಿ ಭಾರತೀಯ ಸೈನಿಕರು ಬಲಿಯಾದರು. 2020ರ ಮೇನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾ ನಡೆಸಿದ ದಾಳಿಯಲ್ಲಿ ನಮ್ಮ ದೇಶದ 20 ಮಂದಿ ಸೈನಿಕರು ವೀರ ಮರಣವನ್ನಪ್ಪಿದರು. ಈ ಎರಡೂ ಪ್ರಕರಣಗಳಲ್ಲಿ ಹತ್ಯೆಗೀಡಾದ ಸೈನಿಕರಿಗೆ ಇನ್ನೂ ಸರಿಯಾದ ನ್ಯಾಯ ಸಿಕ್ಕಿಲ್ಲ. ಈಗ ಕಾಶ್ಮೀರದ ಫಹಲ್ಗಾಮ್ ನಲ್ಲಿ 28 ಮಂದಿ ಮುಗ್ಧ ನಾಗರಿಕರು ಬಲಿಯಾಗಿದ್ದಾರೆ.ಇವರೆಲ್ಲ ಹತ್ಯೆಯ ಹಿಂದೆ ಭದ್ರತಾ ವೈಫಲ್ಯವೂ ಇದೆ ಎಂದು ದೂರಿದರು.

ಕೇಂದ್ರ ಸರ್ಕಾರ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ನೀಡುವ ಬಗ್ಗೆ ಖಾತ್ರಿಪಡಿಸಬೇಕು.ಈ ಕೃತ್ಯದ ಹಿಂದೆ ಇರುವ ಎಲ್ಲಾ ಭಯೋತ್ಪಾದಕ ಸಂಘಟನೆಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

ಗುಂಡಿನ ದಾಳಿಗೆ ಬಲಿಯಾದ ಕರ್ನಾಟಕದ ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಹಾಗೂ ಮಧುಸೂಧನ ರಾವ್ ಸೇರಿದಂತೆ 28 ಮಂದಿ ಜನರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಹೋರಾಟಗಾರರಾದ ಸುನಂದ ಜಯರಾಂ, ಕೃಷ್ಣಪ್ರಕಾಶ್, ಮುದ್ದೇಗೌಡ, ನ್ಯಾಯವಾದಿ ಬಿ.ಟಿ.ವಿಶ್ವನಾಥ್, ಕರುನಾಡ ಸೇವಕರು ಸಂಘಟನೆಯ ಎಂ ಬಿ ನಾಗಣ್ಣಗೌಡ, ನೆಲದನಿ ಬಳಗದ ಲಂಕೇಶ್, ಕವಿ ರಾಜೇಂದ್ರ, ಮಹಿಳಾ ಮುನ್ನಡೆಯ ಪೂರ್ಣಿಮ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ನ ವಿನಯ್ ಕುಮಾರ್, ಚಿತ್ರಕೂಟದ ಅರವಿಂದ್ ಪ್ರಭು, ಕೆಂಪರಾಜು, ಜಾಗೃತ ಕರ್ನಾಟಕದ ನಾಗೇಶ್, ಸಂತೋಷ್, ಸುಬ್ರಮಣ್ಯ, ಕರ್ನಾಟಕ ಜನಶಕ್ತಿಯ ಎಂ.ಸಿದ್ದರಾಜು, ಅಂಜಲಿ, ಬಾಬು, ಎಸ್.ಡಿ.ಪಿ.ಐ ಮುಕ್ತಾರ್ ಅಹಮದ್, ಇರಫ್, ತಾಯೇರ್ ಸೇರಿದರಂತೆರ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ