ರಾಜ್ಯದ ಗುಲ್ಬರ್ಗದಲ್ಲಿರುವ ಬೌದ್ಧ ವಿಹಾರ ಮಾದರಿ ದಕ್ಷಿಣದ ಮಂಡ್ಯ ಜಿಲ್ಲೆಯಲ್ಲಿ ಬೌದ್ಧ ವಿಹಾರ ಸ್ಥಾಪನೆಯಾಗಲಿ, ಅದಕ್ಕೆ ಸರ್ಕಾರದೊಂದಿಗೆ ಚರ್ಚಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾ ಬುದ್ಧಿಸ್ಟ್ ಒಕ್ಕೂಟ, ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಹುಟ್ಟಿದ ಬೌದ್ಧ ಧಮ್ಮವನ್ನು ಬೆಳೆಯಲು ಬಿಡಲಿಲ್ಲ, ಇಷ್ಟೊತ್ತಿಗೆ ಬುದ್ಧನ ಸಂದೇಶ ಪ್ರತಿ ಮನೆ ಮನೆಗೆ ತಲುಪಬೇಕಿತ್ತು ಆದರೆ ಅದು ಬೆಳೆಯದಂತೆ ತೊಂದರೆ ಕೊಟ್ಟಿದ್ದಾರೆ, ವಿದೇಶಗಳಲ್ಲಿ ದೊಡ್ಡಮಟ್ಟಕ್ಕೆ ಬೌದ್ಧ ಧಮ್ಮ ಬೆಳವಣಿಗೆ ಕಂಡಿದ್ದರಿಂದ ಆ ರಾಷ್ಟ್ರಗಳೆಲ್ಲ ಪ್ರಗತಿ ಹೊಂದಿವೆ, ಭಾರತದಲ್ಲಿ ಬೌದ್ಧ ಧಮ್ಮ ಬೆಳವಣಿಗೆಯಾಗಿದ್ದರೆ ಆ ಮಟ್ಟದ ಪ್ರಗತಿಯನ್ನು ಕಾಣಬಹುದಿತ್ತು ಎಂದರು.’

ನಾಲ್ಕು ಸಾವಿರ ವರ್ಷಗಳ ಹಿಂದಿನಿಂದಲೂ ಶೋಷಿತರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ, ಇದೀಗ ಸಂವಿಧಾನ ಬದಲಾವಣೆ ಮಾಡುವ ವಿಚಾರವನ್ನು ಹರಿಯಬಿಟ್ಟಿದ್ದಾರೆ, ದೇಶದ ಪ್ರತಿಯೊಬ್ಬರಿಗೂ ಸಮಾನವಾಗಿ ಬದುಕುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ, ಪ್ರತಿಯೊಂದು ವರ್ಗದ ಜನತೆ ಸಂವಿಧಾನದ ಲಾಭ ಪಡೆಯುತ್ತಿದ್ದಾರೆ ಆದರೆ ಸಂವಿಧಾನಕ್ಕೆ ಸಂಕಷ್ಟ ಎದುರಾದಾಗ ಶೋಷಿತ ಸಮುದಾಯಗಳು ಮಾತ್ರ ಬೀದಿಗೆ ಇಳಿದು ಹೋರಾಟ ಮಾಡುತ್ತಿವೆ, ಸಂವಿಧಾನ ಎಲ್ಲರಿಗೂ ಸಮಾನತೆ ಹಾಗೂ ಸಮಾನ ಸವಲತ್ತುಗಳನ್ನು ಕಲ್ಪಿಸಿದೆ ಎಂಬುದನ್ನು ಎಲ್ಲರಲ್ಲೂ ಅರಿವು ಮೂಡಿಸಬೇಕು, ಸಂವಿಧಾನ ರಕ್ಷಣೆಗೆ ಎಲ್ಲರೂ ಸಹ ಮುಂದಾಗುವವರೆಗೂ ಜಾಗೃತಿ ಮೂಡಿಸಬೇಕೆಂದರು.

ದೇಶದ ಶೋಷಿತರನ್ನು ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ವಂಚಿಸುತ್ತಾ ಬರುತ್ತಿರುವ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಶೋಷಿತರ ಸಂಘರ್ಷ ಇದುವರೆಗೂ ತಪ್ಪಿಲ್ಲ. ಸಮಾನತೆ ಸಂದೇಶ ಸಾರಿದ ಬುದ್ಧ ಬಸವಣ್ಣ ಅಂಬೇಡ್ಕರ್ ಮಾರ್ಗದಲ್ಲಿ ಮುನ್ನಡೆಯುವುದು ಅತ್ಯವಶ್ಯಕವಾಗಿದೆ. ಆ ಮೂಲಕ ಸಂಘರ್ಷ ಕೊನೆಗೊಳ್ಳಬೇಕು ಸಮಾನತೆ ಕಾಣಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಚನ್ನಲಿಂಗನಹಳ್ಳಿ ಬೌದ್ಧ ಬಿಕ್ಕು ಜೀತವನದ ಮನೋರಕ್ಕಿತ ಬಂತೇಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಮೂಡ್ನಾಕೊಡು ಚಿನ್ನಸ್ವಾಮಿ, ಪ್ರೊ.ಕೆ.ಎಸ್.ಭಗವಾನ್, ನಾದಾನಂದನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಸಿಇಒ ಕೆ.ಆರ್.ನಂದಿನಿ, ಬುದ್ಧಿಸ್ಟ್ ಒಕ್ಕೂಟದ ಎಂ.ಸಿ.ಬಸವರಾಜು, ಯಮದೂರು ಸಿದ್ದರಾಜು, ರೈತ ಮುಖಂಡರಾದ ಸುನಂದ ಜಯರಾಮ್, ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಇತರರಿದ್ದರು.




