Saturday, November 21, 2026

ಪ್ರಾಯೋಗಿಕ ಆವೃತ್ತಿ

ಬೌದ್ಧ ಸಮ್ಮೇಳನ | ಮಂಡ್ಯದಲ್ಲಿ ಹೊಸ ಬೆಳವಣಿಗೆಯೊಂದಿಗೆ ಹೊಸಹೆಜ್ಜೆ ಕಾಣುತ್ತಿದ್ದೇನೆ – ಚಲುವರಾಯಸ್ವಾಮಿ

ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಹೊಸ ಬೆಳವಣಿಗೆಯೊಂದಿಗೆ ಹೊಸ ಹೆಜ್ಜೆ ಕಾಣುತ್ತಿದ್ದೇನೆ. ಬದಲಾವಣೆ ಅವಶ್ಯಕ, ಆ ನಿಟ್ಟಿನಲ್ಲಿ ನೀವೆಲ್ಲರೂ ಮುನ್ನಡೆಯುತ್ತಿದ್ದೀರಿ. ನಾನು ಇಷ್ಟರ ಮಟ್ಟಿಗಿನ ಬದಲಾವಣೆ ನಿರೀಕ್ಷಿಸಿರಲಿಲ್ಲ. ಆದರೆ ಇಲ್ಲಿ ನೋಡಿದರೆ ಇಷ್ಟೊಂದು ಪ್ರಮಾಣದಲ್ಲಿ ಸಂಘಟನೆಯಾಗಿ ಸಮ್ಮೇಳನದಲ್ಲಿ ಒಗ್ಗೂಡಿರುವುದು ಸಂತಸದ ವಿಚಾರ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,  ಸಾಮಾಜಿಕ ಪಿಡುಗಾಗಿದ್ದ ಅಸ್ಪೃಶ್ಯತೆ ಸಂಪೂರ್ಣವಾಗಿ ನಿರ್ಮೂಲನೆಯಾಗದಿದ್ದರೂ, ಅದರ ಪರಿಣಾಮ ತಗ್ಗಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ಪ್ರಮುಖ ಎಂಬುದನ್ನ ಪ್ರತಿಯೊಬ್ಬರೂ ಅರಿಯಬೇಕೆಂದರು.

ದೇಶದಲ್ಲಿ ಸಮಾನತೆಯ ಬದುಕಿಗಾಗಿ ಹೋರಾಟ ನಡೆದಿದೆ, ಮಹನೀಯರು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಆದರೆ, ಸಮಾನತೆಯ ಹೋರಾಟದಲ್ಲಿ ಎಂದೂ ಸಹ ಗುರುತಿಸಿಕೊಂಡಿರದವರು ಜಾತ್ಯತೀತ ವ್ಯವಸ್ಥೆ, ಸಮಾನತೆ ಪ್ರತಿಪಾದಿಸುವ ಬುದ್ಧಿಜೀವಿಗಳು ಹಾಗೂ ಶೋಷಿತರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಸದಾಕಾಲ ಟೀಕಿಸುತ್ತಾ ಬಂದಿದ್ದಾರೆ. ಜನತೆ ಇತಿಹಾಸ ಅರಿಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಈಗಲೇ ಎಚ್ಚೆತ್ತು ಇತಿಹಾಸವನ್ನು ಅರಿಯಬೇಕೆಂದರು.

ದೇಶದ ಇತಿಹಾಸ, ಸಂವಿಧಾನ, ಜನರ ಹಿತ ಕಾಪಾಡುವ ಕಾಳಜಿ ಹೊಂದಿಲ್ಲದಿದ್ದರೆ ನನ್ನನ್ನು ಸಹ ಟೀಕಿಸಿ, ಯಾರೇ ತಪ್ಪು ಮಾಡಿದರೂ ತಪ್ಪೇ, ತಪ್ಪನ್ನು ಸಹಿಸಿಕೊಳ್ಳುವುದು ಸಹ ಅಪರಾಧ, ಇದರಲ್ಲಿ ಪಕ್ಷ, ವ್ಯಕ್ತಿ ಮುಖ್ಯವಲ್ಲ. ತಪ್ಪನ್ನು ಸರಿಪಡಿಸುವ ಕೆಲಸವಾಗಬೇಕು ಆ ನಿಟ್ಟಿನಲ್ಲಿ ಜನತೆ ಮುನ್ನಡೆಯಬೇಕು ಎಂದು ಮಾರ್ಮಿಕವಾಗಿ ನುಡಿದರು.

ವೇದಿಕೆಯಲ್ಲಿ ಚನ್ನಲಿಂಗನಹಳ್ಳಿ ಬೌದ್ಧ ಬಿಕ್ಕು ಜೀತವನದ ಮನೋರಕ್ಕಿತ ಬಂತೇಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಾಹಿತಿ ಮೂಡ್ನಾಕೊಡು ಚಿನ್ನಸ್ವಾಮಿ, ಪ್ರೊ.ಕೆ.ಎಸ್.ಭಗವಾನ್, ನಾದಾನಂದನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಸಿಇಒ ಕೆ.ಆರ್.ನಂದಿನಿ, ಬುದ್ಧಿಸ್ಟ್ ಒಕ್ಕೂಟದ ಎಂ.ಸಿ.ಬಸವರಾಜು, ಯಮದೂರು ಸಿದ್ದರಾಜು, ರೈತ ಮುಖಂಡರಾದ ಸುನಂದ ಜಯರಾಮ್, ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ