ಜಮ್ಮು ಕಾಶ್ಮೀರದ ಫಹಲ್ಗಾಮ್ ನಲ್ಲಿ ಉಗ್ರರ ದಾಳಿ 28 ಜನ ಅಮಾಯಕ ಪ್ರವಾಸಿಗರು ಹತ್ಯೆಯಾಗಿ, ಇಡೀ ದೇಶವೇ ಶೋಕಿಸುತ್ತಿರುವುವಾಗ ದೇಶವಾಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸಾವಿನ ಮನೆಯಲ್ಲಿಯೂ ರಾಜಕಾರಣ ಮಾಡುತ್ತಾರೆ, ಅಮಾಯಕ ಜನ ಸಾವನ್ನಪ್ಪಿದರೂ ಸಹ ಅವರಿಗೆ ಚುನಾವಣೆ ಮುಖ್ಯವಾಗಿತ್ತು, ಅವರು ಬಿಹಾರದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಕಿಡಿಕಾರಿದರು.
ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ನಡೆದ ಮಂಡ್ಯ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸರ್ವಪಕ್ಷದ ಸಭೆಗೂ ಮೋದಿಯವರು ಭಾಗವಹಿಸಿರಲಿಲ್ಲ, ಇದರಿಂದ ಅವರ ಉಗ್ರದ ದಾಳಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ಧಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದರು.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ನಡೆದಾಗ ಪ್ರಧಾನಿಗಳ ವರ್ತನೆಯನ್ನು ನೀವೆಲ್ಲರೂ ಗಮನಿಸಿದ್ದೀರಿ, ದೇಶದಲ್ಲಿ ಸಹೋದರತೆ, ಪ್ರೀತಿ ವಿಶ್ವಾಸದ ಬದುಕು ಮುಖ್ಯ. ಹೆಣದ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಅವೆಲ್ಲ ತಾತ್ಕಾಲಿಕ. ನೀವೆಲ್ಲರೂ ಒಗ್ಗೂಡಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪಾಠ ಕಲಿಸಿ ಎಂದು ಹೇಳಿದರು.
ಬುದ್ಧನ ತತ್ವ ಸಿದ್ಧಾಂತಗಳು ಎಲ್ಲರಿಗೂ ಮಾದರಿ, ಬುದ್ಧನ ಸಂದೇಶ ಸಾರುವ ಸಮ್ಮೇಳನ ನಿರಂತರವಾಗಿ ನಡೆಯಲಿ, ವಿಶ್ವದ ೨೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬೌದ್ಧ ಧಮ್ಮ ಬೃಹದಾಕಾರವಾಗಿ ಬೆಳೆದಿದೆ, ಆದರೆ, ದೇಶದಲ್ಲಿ ಅದರ ಬೆಳವಣಿಗೆಗೆ ಅವಕಾಶ ನೀಡದೆ ತೊಂದರೆ ನೀಡಿರುವ ಇತಿಹಾಸ ಕಣ್ಮುಂದೆ ಇದೆ ಎಂದರು.




