Saturday, November 21, 2026

ಪ್ರಾಯೋಗಿಕ ಆವೃತ್ತಿ

”ಮಹೇಶ್ ಜೋಶಿ ಅಮಾನತು ಮಾಡಿ – ಕಸಾಪ ಉಳಿಸಿ” ಬೃಹತ್ ಅಂದೋಲನ ; ಕೆ.ಟಿ.ಶ್ರೀಕಂಠೇಗೌಡ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿಯನ್ನು ಅಮಾನತ್ತು ಮಾಡಿ, ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ” ಅಂದೋಲನ ಮೇ 17 ರಂದು ಮಂಡ್ಯದಲ್ಲಿ ಮೈಸೂರು ವಿಭಾಗಮಟ್ಟದ ವಿವಿಧ ಕನ್ನಡ ಪರ, ಜನ ಪರ ಸಂಘಟನೆಗಳ ಮುಖ್ಯಸ್ಥರು, ಸಾಹಿತಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಈಗಾಗಲೇ ಅನೇಕ ಆರ್ಥಿಕ ಅಶಿಸ್ತು ಮತ್ತು ಸರ್ವಾಧಿಕಾರದ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಆಡಳಿತ ಮಂಡಳಿಯನ್ನು ತಿದ್ದುಪಡಿ ಮೂಲಕ ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ ಎಂದರು.

ಡಾ.ಮಹೇಶ್ ಜೋಶಿಯವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಿರಿಯ ಸಾಹಿತಿಗಳೂ ಆದಂತಹ ಡಾ.ಹಂಪನಾಗರಾಜಯ್ಯ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿರುವ ಕಾರಣಕ್ಕೆ ಅವರ ಬಗ್ಗೆ ಡಾ. ಮಹೇಶ್ ಜೋಶಿ ಅವರು ಸುದ್ದಿಗೋಷ್ಠಿಯಲ್ಲಿ ಸುಮಾರು ೪೫ ವರ್ಷಗಳ ಹಿಂದಿನ ದೂರುಗಳನ್ನು ಇಟ್ಟುಕೊಂಡು ಪ್ರಸ್ತುತ ದ್ವೇಷದ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪಾತ್ರ ಸಲ್ಲಿಸಿದ್ದು ಈ ಕುರಿತು ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿ ತತಕ್ಷಣ ಸರ್ಕಾರ ಮಧ್ಯ ಪ್ರವೇಶ ಮಾಡಿ, ಮಹೇಶ್ ಜೋಶಿಯನ್ನು ಅಮಾನತಿನಲ್ಲಿಟ್ಟು ಕಸಾಪದಲ್ಲಿನ ಅವ್ಯವಹಾರವನ್ನು ವಿಚಾರಣೆ ಮಾಡಬೇಕು ಎಂದು ಒತ್ತಾಯಿಸಿದರು.

೨.೫ ಕೋಟಿಗೆ ಇದುವರೆಗೂ ಲೆಕ್ಕ ನೀಡದ ಜೋಶಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡಿದ್ದ ೩೦ ಕೋಟಿ ಅನುದಾನದಲ್ಲಿ ೨.೫ ಕೋಟಿಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಪಡೆದಿರುತ್ತದೆ, ಈಗಾಗಲೇ ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿಯು ೨೭.೫೦ ಕೋಟಿಗೆ ಕೆ.ಎಸ್.ಎಂ.ಸಿ. & ಎ ಅಡಿಯಲ್ಲಿ ವೆಚ್ಚ ಮಾಡಿ ಲೆಕ್ಕ ಪತ್ರಗಳನ್ನು ನೀಡಿರುತ್ತಾರೆ. ಆದರೆ ಮಹೇಶ್ ಜೋಶಿಯವರು ೨.೫ ಕೋಟಿಗೆ ಇದುವರೆಗೂ ಲೆಕ್ಕ ನೀಡದೆ, ಇನ್ನೂ ೬ ತಿಂಗಳ ಸಮಯವಿದೆ, ನಂತರ ಲೆಕ್ಕ ಕೊಡುತ್ತೇನೆಂದು ಹೇಳುವ ಮೂಲಕ ಉದ್ಧಟತನ ಮೆರೆದಿರುತ್ತಾರೆ ಎಂದು ಹೇಳಿದರು.

೨೦೨೩-೨೪ನೇ ಸಾಲಿನ ವಾರ್ಷಿಕ ವರದಿಯಲ್ಲಿ ಮತ್ತು ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ, ಕಾಮಗಾರಿಗಳ ಬಗ್ಗೆ, ಕಟ್ಟಡ ನವೀಕರಣದ ಬಗ್ಗೆ ಇನ್ನಿತರ ಲೋಪದೋಷಗಳನ್ನು ಈಗಾಗಲೆ ಎತ್ತಿ ಹಿಡಿದಿದ್ದಾರೆ. ಇದಕ್ಕೆ ಅಧ್ಯಕ್ಷರು ಸರಿಯಾದ ಉತ್ತರಗಳನ್ನು ನೀಡದೆ ಮುಂದೆ ಸರಿಪಡಿಸಿಕೊಳ್ಳುತ್ತೇನೆ ಎಂಬಂತಹ ತಾತ್ಸಾರದ ಮಾತುಗಳನ್ನೇ ಆಡುತ್ತಾ ಬಂದಿದ್ದಾರೆ. ಹಾಗಾಗಿ ಅವ್ಯವಹಾರಗಳು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ನಾವು ನಿಖರವಾದ ಮಾಹಿತಿ ತೋರಬೇಕು ಎಂದು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ ವರ್ಷಗಳ ಇತಿಹಾಸದಲ್ಲಿ ಯಾವ ಅಧ್ಯಕ್ಷರೂ ದಿನಭತ್ಯೆ, ಪ್ರಯಾಣ ಭತ್ಯೆ, ವೇತನ ಪಡೆದು ಸಾಹಿತ್ಯ ಸೇವೆ ಸಲ್ಲಿಸಿರುವ ಉದಾಹರಣೆಯಿಲ್ಲ. ಆದರೆ ಈ ವ್ಯಕ್ತಿ ತನ್ನೆಲ್ಲ ಖರ್ಚನ್ನು ಸಾಹಿತ್ಯ ಸೇವೆಯ ಖರ್ಚು ಎಂದು ತೋರಿಸಿ, ಆರ್ಥಿಕ ಅಶಿಸ್ತು ಮೆರೆದಿದ್ದಾರೆ ಎಂದು ದೂರಿದರು.

ಕೆ.ಟಿ.ಶ್ರೀಕಂಠೇಗೌಡ ಅವರು ಸಾಹಿತ್ಯದ ಹೋರಾಟಗಾರರಾಗಿ ನಮ್ಮೊಂದಿಗೆ ಒಡಗೂಡಿ ಹೋರಾಟ ಮಾಡುತ್ತಿದ್ದಾರೆ. ಅವರು ರಾಜಕಾರಣಿಯಾಗಿ ಇಲ್ಲಿ ಕಾಣಿಸಿಕೊಂಡಿಲ್ಲ, ಒಂದು ವೇಳೆ ಕಾಣಿಸಿಕೊಂಡಲ್ಲಿ, ನಾವು ಅವರನ್ನು ಹೊರಗಿಟ್ಟು ಈ ಹೋರಾಟ ಮುಂದುವರೆಸುತ್ತೇವೆ. ಅವರು ರಾಜಕಾರಣಿಯಾಗುವುದಕ್ಕೂ ಮೊದಲು ಪ್ರಾಧ್ಯಾಪಕರಾಗಿದ್ದವರು, ಕನ್ನಡ ಸಾಹಿತ್ಯದಲ್ಲಿ ತೊಡಗಿಕೊಂಡಿದ್ದವರು ಎಂದು ಸಮರ್ಥಿಸಿಕೊಂಡರು.

ಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪ್ರೊ.ಜಿ.ಟಿ.ವೀರಪ್ಪ , ಎಂ.ವಿ.ಧರಣೇಂದ್ರಯ್ಯ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಸ್.ಕೆ.ಮಹೇಶ್ ಹಾಗೂ ಸಿ.ಕುಮಾರಿ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ