Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜನರಿಗೆ ಉಪಕಾರ ಸ್ಮರಣೆ ಗುಣ ರಕ್ತದಲ್ಲೇ ಇದೆ: ದಿನೇಶ್‌ ಗೂಳಿಗೌಡ


• ರಾಜಶ್ರೀ ಕೃಷ್ಣರಾಜ ಒಡೆಯರ್‌ ಪ್ರತಿಮೆ ಅನಾವರಣ ಮಾಡಿದ ಸ್ಟಾರ್‌ ಚಂದ್ರು

• ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಅನಾವರಣ ಮಾಡಿದ ದಿನೇಶ್‌ ಗೂಳಿಗೌಡ

• ವಿಸಿ ನಾಲೆ ಅಭಿವೃದ್ಧಿಗೆ ಶ್ರಮಿಸಿದ ಶಾಸಕರಾದ ರವಿಕುಮಾರ್‌ ಗಣಿಗ ಕ್ರಿಯಾಶೀಲ ಶಾಸಕರು: ಶಾಸಕ ದಿನೇಶ್‌ ಗೂಳಿಗೌಡ


ಮಂಡ್ಯ ಜಿಲ್ಲೆಯ ಜನರಿಗೆ ಸಹಾಯ ಮಾಡಿದವರನ್ನು ಸ್ಮರಿಸುವ ಮಹದ್ಗುಣ ರಕ್ತದಲ್ಲೇ ಬಂದಿದೆ. ರಾಜಶ್ರೀ ಕೃಷ್ಣರಾಜ ಒಡೆಯರ್‌ ಅವರು ಮತ್ತು ಜಗತ್ತಿನ ಅತ್ಯಂತ ಬುದ್ಧಿವಂತ, ತಾಂತ್ರಿಕ ನಿಪುಣರಾದ ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆಗಳನ್ನು ಮುಂದಿನ ದಿನಮಾನಗಳಲ್ಲಿ ಯುವಜನತೆಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ವಿಧಾನಪರಿಷತ್‌ ಶಾಸಕರಾದ ದಿನೇಶ್‌ ಗೂಳಿಗೌಡ ಹೇಳಿದರು.

ಮಂಡ್ಯ ವಿಧಾನಸಭಾ ಕ್ಷೇತ್ರ ಚಂದಗಾಲು ಗ್ರಾಮದಲ್ಲಿ ಸೋಮವಾರ ನಡೆದ ಶ್ರೀಪಟ್ಟಲದಮ್ಮ ಮತ್ತು ಕೊಲ್ಲಾಪುರದಮ್ಮ ದೇವಿಯ ಮಹಾದ್ವಾರ ಪ್ರತಿಷ್ಠಾಪನೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ಮಹಾನ್‌ ಚೇತನರು ಸೇರಿ ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಾಣ ಮಾಡಿರದಿದ್ದರೆ ಇವತ್ತು ಮಂಡ್ಯ ಜಿಲ್ಲೆ ಬರಪೀಡಿತವಾಗಿರುತ್ತಿತ್ತು. ರಾಜಕಾರಣಿಗಳ ಕೊಡುಗೆಗಿಂತ ಇವರಿಬ್ಬರ ಕೊಡುಗೆ ಮೈಸೂರು ಮಹಾಸಂಸ್ಥಾನಕ್ಕೆ ಅಗಾಧವಾಗಿದೆ ಎಂದು ಅಭಿಪ್ರಾಯಪಟ್ಟರು.

ನಾಲ್ವಡಿ ಕೃಷ್ಣರಾಜ ಒಡೆಯರ್ ‘ಮಾದರಿ ಮೈಸೂರಿ’ನ ರೂವಾರಿಗಳು
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ 24ನೇ ರಾಜರಾಗಿ ಸರ್ವಾಂಗೀಣ ಪ್ರಗತಿಗೆ ಕಾರಣರಾದರು. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರಂತೆ ನಾಲ್ವಡಿಯವರ ಪಾತ್ರ ಮಹತ್ವದ್ದು. ಪ್ರಾಜ್ಞರಿಗೆ ಅಧಿಕಾರ ನೀಡುವ ಮನೋಬಲ ಅರಸನಿಗಿರಬೇಕು. ಅಂಥದ್ದೊಂದು ಗುಣ ಇವರಲ್ಲಿ ಇದ್ದಿದ್ದೇ ಇಷ್ಟೆಲ್ಲ ಸಾಧನೆಗೆ ಕಾರಣವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ಒಡೆಯರ್‌ ಅವರು ಅಧಿಕಾರ ವಹಿಸಿಕೊಂಡು ಮೈಸೂರನ್ನು ‘ಮಾದರಿ ಮೈಸೂರು’ ಮಾಡಿದರು. ಪ್ರಜಾ ಪ್ರತಿನಿಧಿ, ನ್ಯಾಯ ವಿಧಾಯಕ ಸಭೆ ಸ್ಥಾಪಿಸಿ ಜನತೆಯ ಆಡಳಿತಕ್ಕೆ ಉತ್ತೇಜನ ನೀಡಿದರು. ಗ್ರಾಮ ಪಂಚಾಯಿತಿಗಳನ್ನು ರಚಿಸಿದರು. ಶಿಕ್ಷಣ, ವೈದ್ಯಕೀಯ, ನೀರಾವರಿ, ಸಾರಿಗೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ಉಚಿತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದಲ್ಲದೆ, ಮೈಸೂರು ವಿವಿಯನ್ನು ಸ್ಥಾಪನೆ ಮಾಡಿದ್ದರು. ಮೈಸೂರಿನಲ್ಲಿ ಉತ್ತಮ ಕಟ್ಟಡ, ರಸ್ತೆ, ಉದ್ಯಾನ ನಿರ್ಮಿಸಿದರು. ದೇವದಾಸಿ ಪದ್ಧತಿ ನಿಷೇಧ, ವಿಧವೆಯರ ಮರುವಿವಾಹಕ್ಕೆ ಅವಕಾಶ, ಸ್ತ್ರೀಯರಿಗೆ ಮತದಾನದ ಹಕ್ಕು ನೀಡಿದರು. ರೈತರಿಗೆ ಸಹಕಾರಿ ಸಂಘವನ್ನು ಸ್ಥಾಪಿಸುವ ಮೂಲಕ ರೈತಸ್ನೇಹಿಯಾಗಿ ಆಡಳಿತವನ್ನು ನಡೆಸಿದ್ದರು ಎಂದು ದಿನೇಶ್‌ ಗೂಳಿಗೌಡ ಹೇಳಿದರು.

ಸರ್ ಎಂ. ವಿಶ್ವೇಶ್ವರಯ್ಯ ಆಧುನಿಕ ಭಾರತದ ಶಿಲ್ಪಿ
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರು. ನೀರಾವರಿ ಕ್ಷೇತ್ರದ ದಿಗ್ಗಜರಾಗಿ ದಖನ್ ಪ್ರಸ್ಥಭೂಮಿಯಲ್ಲಿ ಕ್ರಾಂತಿ ಮಾಡಿದರು. ಸೆಪ್ಟೆಂಬರ್ 15 ಅನ್ನು ಎಂಜಿನಿಯರ್ ದಿನವೆಂದು ಆಚರಿಸಲಾಗುತ್ತದೆ. ಮೈಸೂರು ಸಂಸ್ಥಾನದ ದಿವಾನರಾಗಿ ಕೈಗಾರಿಕೆ ಸ್ಥಾಪನೆಗೆ ನೆರವಾದರು. ಮೈಸೂರು ಸಂಪದಭಿವೃದ್ಧಿ ಸಮ್ಮೇಳನವನ್ನು ಆರಂಭಿಸಿದರು. ಮುಖ್ಯ ಎಂಜಿನಿಯರ್ ಆಗಿ ರಸ್ತೆ, ರೈಲ್ವೆ, ನೀರಾವರಿ ಯೋಜನೆ ರೂಪಿಸಿದರು. ಕೃಷ್ಣರಾಜಸಾಗರ ಅಣೆಕಟ್ಟು, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಸಾರ್ವಜನಿಕ ಗ್ರಂಥಾಲಯಗಳು, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಕಾರಣರಾದರು ಎಂದು ದಿನೇಶ್‌ ಗೂಳಿಗೌಡ ಅವರು ಬಣ್ಣಿಸಿದರು.

ಗಣಿಗ ಕ್ರಿಯಾಶೀಲ ಶಾಸಕರು: ಕಳೆದ ಎರಡು ವರ್ಷದ ಅವಧಿಯಲ್ಲಿ ವಿ.ಸಿ.ನಾಲೆ ಅಭಿವೃದ್ಧಿಗೆ ಈ ಕ್ಷೇತ್ರದ ಕ್ರಿಯಾಶೀಲ ಶಾಸಕರಾದಂತಹ ರವಿಕುಮಾರ್‌ ಗಣಿಗರವರು 285 ಕೋಟಿ ರೂಪಾಯಿ ಅನುದಾನವನ್ನು ತಂದಿದ್ದಾರೆ. ಅವರ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಇದೇ ವೇಳೆ ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪ್ರತಿಮೆಗಳ ಲೋಕಾರ್ಪಣೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ರವಿಕುಮಾರ್‌ ಗಣಿಗ ಅವರು ವಹಿಸಿದ್ದರು. ಜಂಗಮಮಠದ ಸಿದ್ದಲಿಂಗ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್‌ ನಾಯಕರು, ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿಗಳಾಗಿದ್ದ ಸ್ಟಾರ್‌ ಚಂದ್ರು ಅವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಸರ್‌.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಯುವ ಮುಖಂಡರಾದ ಸಚಿನ್‌ ಚಲುವರಾಯಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಿ.ತ್ಯಾಗರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ