ವರದಿ: ಪ್ರಭು ವಿ ಎಸ್
ಕಳೆದ ಹಲವಾರು ವರ್ಷಗಳಿಂದ ಫುಟ್ಬಾತ್ನಲ್ಲಿ ಜೀವನ ನಡೆಸುತ್ತಿದ್ದ ಕುಟುಂಬದವರಿಗೆ ಪುರಸಭೆ ಸದಸ್ಯೆ ಪ್ರಿಯಾಂಕ ಅಪ್ಪುಗೌಡ ತಮ್ಮ ವೈಯಕ್ತಿಕ ಹಣದಲ್ಲಿ ನಿವೇಶನ ಖರೀದಿಸಿ ಅಗತ್ಯ ದಾಖಲಾತಿಗಳುಳ್ಳ ಪತ್ರವನ್ನು ಕುಟುಂಬದವರಿಗೆ ಸೋಮವಾರ ಹಸ್ತಾಂತರ ಮಾಡಿದರು.
ಪುರಸಭಾ ವ್ಯಾಪ್ತಿಯ ವಾರ್ಡ್ ನಂ. 4ರ ಮದ್ದೂರು-ಮಳವಳ್ಳಿ ರಸ್ತೆ ಬದಿಯ ಫುಟ್ಬಾತ್ನಲ್ಲಿ ತಮ್ಮ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದ ಚೌಡಮ್ಮ ಎಂಬುವವರಿಗೆ 30 x33 ಅಳತೆಯುಳ್ಳ ನಿವೇಶನದ ಪತ್ರವನ್ನು ಹಸ್ತಾಂತರ ಮಾಡುವುದರ ಮೂಲಕ ಮಾನವೀಯತೆ ಮೆರೆದರು.
2018ರ ಪುರಸಭೆ ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದ ವೇಳೆ ವಾರ್ಡ್ ವ್ಯಾಪ್ತಿಯ ಚೌಡಮ್ಮ ಕಳೆದ ಹಲವಾರು ವರ್ಷಗಳಿಂದಲೂ ಯಾವುದೇ ಸೂರು, ನಿವೇಶನ ಇಲ್ಲದೆ ಫುಟ್ಬಾತ್ನಲ್ಲೇ ಜೀವನ ನಡೆಸುತ್ತಿದ್ದು ತಾವು ಆರ್ಥಿಕವಾಗಿ ಹಿಂದುಳಿದಿರುವುದರಿಂದ ತಮಗೆ ಪುರಸಭೆ ವತಿಯಿಂದ ನಿವೇಶನ ಒದಗಿಸುವಂತೆ ತಮ್ಮ ಅಳಲು ತೋಡಿಕೊಂಡಿದ್ದರು.
ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ತಮ್ಮ ಕುಟುಂಬಕ್ಕೆ ನಿವೇಶನ ಒದಗಿಸುವಂತೆ ವೃದ್ಧೆ ಚೌಡಮ್ಮ ಮನವಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಅಂದಿನ ಅಭ್ಯರ್ಥಿಯಾಗಿದ್ದ ಪ್ರಿಯಾಂಕ ಅಪ್ಪುಗೌಡ ತಾವು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಿವೇಶನವನ್ನು ಒದಗಿಸುವ ಭರವಸೆ ನೀಡಿದ್ದರು.
ಬಳಿಕ ಮಾತನಾಡಿದ ಪ್ರಿಯಾಂಕ ಅಪ್ಪುಗೌಡ ತಾವು ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ಚೌಡಮ್ಮ ಕುಟುಂಬದವರು ನಿವೇಶನ ಒದಗಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಾವು ಗೆಲುವು ಸಾಧಿಸಿದ ಬಳಿಕ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಒದಗಿಸಲು ಮುಂದಾದರೂ ಸಮರ್ಪಕವಾಗಿ ನಿವೇಶನ ಸಿಗದ ಕಾರಣ ತಮ್ಮ ವೈಯಕ್ತಿಕ ಹಣದಲ್ಲಿ ಸುಮಾರು ಸಾವಿರ ಅಡಿಯ ನಿವೇಶನವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಿರುವುದಾಗಿ ತಿಳಿಸಿದರು.
ತಾಲೂಕಿನ ಕುದರಗುಂಡಿ ಕಾಲೋನಿ ಬಳಿ ನಿವೇಶನವೊಂದನ್ನು ಖರೀದಿಸಿ ಚೌಡಮ್ಮನವರ ಒತ್ತಾಸೆಯಂತೆ ಸೊಸೆ ಪುಟ್ಟಲಿಂಗಮ್ಮನವರ ಹೆಸರಿಗೆ ನಿವೇಶನದ ಅಗತ್ಯ ದಾಖಲಾತಿ ಪತ್ರವನ್ನು ಹಸ್ತಾಂತರಿಸಿ ವೃದ್ಧೆ ಚೌಡಮ್ಮನವರಿಂದ ಆಶೀರ್ವಾದ ಪಡೆದರು.
ಅಭಿನಂದನೆ
ಕೊಟ್ಟ ಮಾತಿನಂತೆ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಲಕ್ಷಾಂತರ ರೂ. ವೆಚ್ಚದ ನಿವೇಶನವನ್ನು ಒದಗಿಸಿರುವ ಪುರಸಭೆ ಸದಸ್ಯೆ ಪ್ರಿಯಾಂಕಅಪ್ಪುಗೌಡ ದಂಪತಿಗಳನ್ನು ಕುಟುಂಬದವರು ಅಭಿನಂದಿಸಿ ಗೌರವಿಸಿದರು.




