ರೈತರು ಉತ್ತಮ ಇಳುವರಿ ಪಡೆಯಲು ತಮ್ಮ ಬೆಳೆಗಳಿಗೆ ಪೋಷಕಾಂಶವನ್ನು 4:2:1 ರ ಅನುಪಾತದಲ್ಲಿ ಬಳಕೆ ಮಾಡಬೇಕೆಂದು ಜಂಟಿ ಕೃಷಿ ನಿರ್ದೇಶಕ ವಿ ಎಸ್ ಅಶೋಕ್ ತಿಳಿಸಿದರು.
ಮಂಡ್ಯ ತಾಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಮಂಡ್ಯದ ಪರತಂತ್ರ ಜೀವಿ ಪ್ರಯೋಗಾಲಯದಲ್ಲಿ ನಡೆದ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲಾ ಕೃಷಿ ಪರಿಕರ ಮಾರಾಟಗಾರರು, ರೈತರಿಗೆ ಕೃಷಿ ಪರಿಕರ ಮಾರಾಟ ಮಾಡುವ ಸಮಯದಲ್ಲಿ ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೇಟ್, ಬೋರಾಕ್ಸ್ ಹಾಗೂ ಸೂಕ್ಷ್ಮಾಣು ಜೀವಿಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ ಪರಿಕರಗಳನ್ನು ಮಾರಾಟ ಮಾಡಬೇಕಾಗಿ ಹಾಗೂ ರೈತರು ಕೀಟನಾಶಕಗಳನ್ನು ಮಿತವಾಗಿ ಬಳಸಬೇಕೆಂದರು.
ಮಂಡ್ಯ ಉಪ ಕೃಷಿ ನಿರ್ದೇಶಕ ಮುನೇಗೌಡ ಮಾತನಾಡಿ ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಪರವಾನಿಗೆ ಹೊಂದಿರಬೇಕು ಹಾಗೂ ಪರವಾನಿಗೆಯಲ್ಲಿ ನಮೂದು ಮಾಡಲಾಗಿರುವ ಕೃಷಿ ಪರಿಕರಗಳನ್ನು ಮಾತ್ರ ರೈತರಿಗೆ ಮಾರಾಟ ಮಾಡಬೇಕಾಗಿ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರ ಕಚೇರಿ ಜಾರಿ ದಳದ ಚನ್ನಕೇಶವ ಮೂರ್ತಿ ಮಾತನಾಡಿ, ಎಲ್ಲಾ ಕೃಷಿ ಪರಿಕರ ಮಾರಾಟಗಾರರು ನಿಗದಿತ ನಮೂನೆಯಲ್ಲಿ ದಾಖಲಾತಿಗಳ ನಿರ್ವಹಣೆ ಮಾಡಲು ಸೂಚಿಸಿದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಸುನಿತಾ ಹೆಚ್ ಹಾಗೂ ಕೃಷಿ ಅಧಿಕಾರಿಗಳಾದ ದೇವರಾಜೇಗೌಡ, ಹರ್ಷ, ಗಂಗಾ ನರಸಿಂಹಯ್ಯ ಭಾಗವಹಿಸಿದ್ದರು.




