Friday, November 20, 2026

ಪ್ರಾಯೋಗಿಕ ಆವೃತ್ತಿ

ಕನ್ನಡಿಗರು ಬೀದಿಗಿಳಿಯದೇ ದ್ವಿಭಾಷಾ ಹಕ್ಕು ಸಿಗಲ್ಲ ; ನಾಗೇಗೌಡ ಕೀಲಾರ

ತಮಿಳುನಾಡು  ದ್ವಿಭಾಷಾ ನೀತಿಯನ್ನು ದಕ್ಕಿಸಿಕೊಳ್ಳುತ್ತದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ಗಾಗಲೀ ಬಿಜೆಪಿಗಾಗಲೀ ಇದು ಬೇಕಿಲ್ಲ. ಹಾಗಾಗಿ ಏಳು ಕೋಟಿ ಕನ್ನಡಿಗರು ಬೀದಿಗಿಳಿದು ರಾಜಕೀಯ ಸಂಘರ್ಷ ಮಾಡುವವರೆಗೂ ನಮಗೆ ದ್ವಿಭಾಷಾ ಹಕ್ಕು ಸಿಗಲ್ಲ’ ಎಂದು ಚಿಂತಕ ನಾಗೇಗೌಡ ಕೀಲಾರ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಬಾಲಭವನದಲ್ಲಿ ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ. ನಾಗಣ್ಣಗೌಡ ಅವರ ಜನ್ಮದಿನದ ಅಂಗವಾಗಿ ‘ಎರಡು ನುಡಿ- ಜಾಗೃತಿಯ ಕಿಡಿ’ ಎಂಬ ಘೋಷಣೆಯೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ದ್ವಿಭಾಷಾ ನೀತಿ ಜಾರಿಗಾಗಿ ಸಂವಾದ’ದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಹಲವು ಭಾಷೆಗಳು ಕೂಡಿ ಅಧಿಕಾರ ರಾಷ್ಟ್ರೀಯತೆಯಾಗಿದೆ. ವಿಕೇಂದ್ರೀಕರಣ ಮಾಡಬೇಕಿದೆ. ನಮ್ಮ ಆಳ್ವಿಕೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಹಾಗೂ ಬ್ಯಾಂಕಿಂಗ್ ಸೇವೆ, ಶಿಕ್ಷಣ ವ್ಯವಸ್ಥೆಯನ್ನು ನಾವೇ ನೋಡಿಕೊಳ್ಳುತ್ತೇವೆ ಎನ್ನುವ ಉದ್ದೇಶವಿಟ್ಟುಕೊಳ್ಳಬೇಕು. ಈಗ ಇರುವ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ದ್ವಿಭಾಷಾ ನೀತಿ ಬರುವುದು ಸಾಧ್ಯವೇ ಇಲ್ಲ. ಹಾಗಾಗಿ ರಾಜಕೀಯ ಸಂಘರ್ಷ ಹುಟ್ಟುಹಾಕಬೇಕು. ಆ ಮೂಲಕ ನ್ಯಾಯ ಪಡೆದುಕೊಳ್ಳಬೇಕು’ ಎಂದರು.

ಸಾಂವಿಧಾನಿಕವಾಗಿ ಶಿಕ್ಷಣ ಎನ್ನುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಿಜವಾದ ಬದ್ಧತೆ ಇದ್ದಿದ್ದರೆ ಸ್ಟೇಟ್ ಬೋರ್ಡ್, ಸಿಬಿಎಸ್‌ಇ, ಐಸಿಐಸಿಐ ಬೋರ್ಡ್ ಎನ್ನುವುದು ಕನಿಷ್ಠ ಪಿಯುಸಿವರೆಗಾದರೂ ಇರಬಾರದಿತ್ತು. ಇದರಲ್ಲಿ ಸರ್ಕಾರವೇ ನಡೆಸುವ ಶಿಕ್ಷಣ ಆಗಬೇಕಿತ್ತು. ಇದರಿಂದ ಸರ್ಕಾರಕ್ಕೆ ಅನುಕೂಲವೇ ಇದೆ. ಕನ್ನಡ, ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು. ಹಿಂದಿ ಭಾಷೆಯ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಹೊರೆಯಾಗುತ್ತದೆ. ಹೀಗಾಗಿ ದ್ವಿಭಾಷಾ ನೀತಿಯೇ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ವಿಶೇಷವಾಗಿ ಕನ್ನಡಿಗರ ಪರವಾಗಿ ನಿಲ್ಲುವ ಹಾಗೂ ನೊಂದವರಿಗೆ ಸ್ಪಂದಿಸಿ ಹೋರಾಟ ಮಾಡುವ ವ್ಯಕ್ತಿತ್ವ ನಾಗಣ್ಣ ಅವರದ್ದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲರಾದ ಬಿ.ಟಿ.ವಿಶ್ವನಾಥ್, ರಮೇಶ್ ಗೌಡ, ಮುಖಂಡರಾದ ಮುಕುಂದ, ಚಂದ್ರು, ವಿನಯ್‌ಕುಮಾ‌ರ್, ಶ್ಯಾಮ್‌ಪ್ರಸಾದ್, ನವೀನ್‌ಕುಮಾ‌ರ್, ಜಯರಾಮ್, ಮಂಗಲ ಶಿವಣ್ಣ, ಸತೀಶ್ ಜವರೇಗೌಡ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ