Friday, November 20, 2026

ಪ್ರಾಯೋಗಿಕ ಆವೃತ್ತಿ

ಛಲವಾದಿ ನಾರಾಯಣಸ್ವಾಮಿ ನೀಚತನದ ಗುಲಾಮಗಿರಿಯ ಹಂತ ತಲುಪಿದ್ದಾರೆ : ಮಾವಳ್ಳಿ ಶಂಕ‌ರ್

ದೇಶ ಮತ್ತು ರಾಜ್ಯದ ಪ್ರಮುಖ ಸ್ಥಾನದಲ್ಲಿರುವ ದಲಿತ ನಾಯಕರನ್ನು ನಾಯಿಗೆ ಹೋಲಿಸಿ ನೀಚ ಮಾತುಗಳನ್ನು ಹಾಡಿರುವ, ನಾರಾಯಣಸ್ವಾಮಿ ರಾಜಕಾರಣದಲ್ಲಿ ಬೇರೆ ಯಾರದ್ದೇ ಉದಾಹರಣೆ ನೀಡಲು ಸಾಧ್ಯವಾಗದಷ್ಟು ನೀಚತನದ ಗುಲಾಮಗಿರಿಯ ಹಂತ ತಲುಪಿದ್ದಾರೆ ಎಂದು ಕಿಡಿಕಾರಿರುವ ದಲಿತ ನಾಯಕ ಮಾವಳ್ಳಿ ಶಂಕ‌ರ್ , ನಾರಾಯಣಸ್ವಾಮಿ ಛಲವಾದಿ ನಾರಾಯಣಸ್ವಾಮಿ ಇಡೀ ದಲಿತ ಸಮುದಾಯದ ಜೊತೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿ ಮಾತನಾಡಿದ ಅವರು,  ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಅವರು ಕೀಳು ಮಟ್ಟದಲ್ಲಿ ಮಾತನಾಡಿರುವುದು ಖಂಡನೀಯವಾಗಿದೆ. ಅವರು ಕೂಡಲೇ ಸಾರ್ವಜನಿಕವಾಗಿ ದಲಿತ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ನಿಲ್ಲಿಸಬೇಕು

ಪ್ರಧಾನಿ ನರೇಂದ್ರ ಮೋದಿ ಆನೆ ಇದ್ದ ಹಾಗೆ. ಉಳಿದವರು ನಾಯಿ ಇದ್ದ ಹಾಗೆ ಎಂಬ ಮಾತಿನ ಅರ್ಥ ಏನು? ಸಂವಿಧಾನ ದೇಶದ ಪ್ರತೀಯೊಬ್ಬರಿಗೂ ಮತ್ತು ಪ್ರತೀಯೊಬ್ಬರನ್ನೂ ಪ್ರಶ್ನಿಸುವುದನ್ನು ಕಲಿಸುತ್ತದೆ. ಮೋದಿಯನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬ ನಾರಾಯಣಸ್ವಾಮಿಯ ಹೇಳಿಕೆ ನೀಚತನದಿಂದ ಕೂಡಿದೆ. ಇದನ್ನು ನಾವು ಖಂಡಿಸುತ್ತೇವೆ. ಸಾರ್ವಜನಿಕವಾಗಿ ಬಾಯಿಗೆ ಬಂದ ಹಾಗೆ ಮಾತನಾಡುವುದು, ತೋಚಿದಂತೆ ಹೇಳಿಕೆ ನೀಡುವುದನ್ನು ಅವರು ಕೂಡಲೇ ನಿಲ್ಲಿಸಬೇಕು. ಹೀಗೆಯೇ ಮುಂದುವರಿದರೆ ಅವರನ್ನು ಸಮಾಜ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ವಿರೋಧ ಪಕ್ಷದ ನಾಯಕರಾಗಿ ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರ ನೀಡುವ ಯೋಗ್ಯತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರಿಗೆ ಇಲ್ಲ ಮೂರು ಅವಧಿಯಲ್ಲಿ ಒಂದೇ ಒಂದು ಸುದ್ದಿಗೋಷ್ಠಿ ನಡೆಸುವ ತಾಕತ್ತು ಆನೆಗೆ ಇಲ್ಲ. ದೇಶ ಯುದ್ಧವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕರೆದ ಸರ್ವ ಪಕ್ಷಗಳ ಸಭೆಗೆ ಹಾಜರಾಗದ, ಸಂಸತ್ತನ್ನು ಸರಿಯಾಗಿ ನಡೆಸಲು ಆಗದವರನ್ನು ಪ್ರಶ್ನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.

ಕೆಟ್ಟದಾಗಿ ಮಾತನಾಡುವ ಪ್ರವೃತ್ತಿ ಬಿಜೆಪಿಯಲ್ಲೇ ಹೆಚ್ಚು

ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವೈಫಲ್ಯಗಳನ್ನು ಮರೆಮಾಚಲು ಪರಿಶಿಷ್ಟ ಜಾತಿಯವರನ್ನು ಹುಡುಕಿ ಅವರ ಮೂಲಕ ಪರಿಶಿಷ್ಟ ನಾಯಕರ ವಿರುದ್ಧ ನೀಚ ಹೇಳಿಕೆಯನ್ನು ನೀಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದನ್ನು ನಾರಾಯಣಸ್ವಾಮಿ ಅರ್ಥಮಾಡಿಕೊಳ್ಳಬೇಕು. ದಲಿತ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುವ ಪ್ರವೃತ್ತಿ ಬಿಜೆಪಿ ಮುಂದುವರಿಸಿದರೆ ಅವರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಮಾವಳ್ಳಿ ಶಂಕರ್ ಎಚ್ಚರಿಸಿದರು.

ಡಾ. ರವಿಕುಮಾರ್ ಬಾಗಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆನೆ ಇದ್ದ ಹಾಗೆ ಅವರನ್ನು ಪ್ರಶ್ನೆ ಮಾಡುವವರು ನಾಯಿ ಇದ್ದ ಹಾಗೆ ಎಂದಿರುವ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಖಂಡನೀಯವಾಗಿದೆ. ಈ ದೇಶದಲ್ಲಿ ಟೀಕೆಗೆ, ಪ್ರಶ್ನೆಗೆ ಹೊರತಾದವರು ಯಾರೂ ಇಲ್ಲ. ಗ್ರಾಮ ಪಂಚಾಯತ್ ಸದಸ್ಯರಿಂದ ಪ್ರಧಾನಿ ವರೆಗೆ ಎಲ್ಲರೂ ಜನಸೇವಕರು. ಅವರ ತಪ್ಪುಗಳನ್ನು ವೈಫಲ್ಯಗಳನ್ನು ಪ್ರಶ್ನೆ ಮಾಡುವುದು ದೇಶದ ಜನರಿಗೆ ಸಂವಿಧಾನ ನೀಡಿದ ಹಕ್ಕು ಇದು ಪ್ರಾಥಮಿಕ ಪಾಠವಾಗಿದ್ದು, ಮೊದಲು ಇದನ್ನು ನಾರಾಯಣಸ್ವಾಮಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ದಲಿತ ಸಮುದಾಯದ ದ್ರೋಹಿ

ಒಬ್ಬ ಸಂಪುಟ ಸಚಿವರನ್ನು ಸಾರ್ವಜನಿಕ ವೇದಿಕೆಯಲ್ಲಿ ಹೀನಾಯವಾಗಿ ನಾಯಿಗೆ ಹೋಲಿಸಿ ಮಾತನಾಡಿರುವುದನ್ನು ಈ ರಾಜ್ಯದ ಜನರು ಕ್ಷಮಿಸಲಾರರು. ಮನುವಾದ, ತಾರತಮ್ಯ, ಮೇಲು ಕೀಲು, ಚಾತುರ್ವಣ್ರವನ್ನು ಪ್ರೋತ್ಸಾಹಿಸುವ ಹಾಗೂ ಸಂವಿಧಾನವನ್ನೇ ಬದಲಾವಣೆ ಮಾಡಬೇಕು ಎಂದು ಆಗ್ರಹಿಸುವವರ ಜೊತೆ ಸೇರಿ, ಅವರ ಚಾಕರಿ ಮಾಡುತ್ತಿರುವ ನಾರಾಯಣಸ್ವಾಮಿ ಅವರು ದಲಿತ ಸಮುದಾಯದ ದ್ರೋಹಿಯಾಗಿದ್ದಾರೆ. ವ್ಯಕ್ತಿ ಗೌರವಕ್ಕೆ ಧಕ್ಕೆ ಬಾರದಂತೆ ಸಂವಿಧಾನದ ಚೌಕಟ್ಟಿನಲ್ಲಿ ಟೀಕೆ ಮಾಡುವುದು ತಪ್ಪಲ್ಲ. ನಾರಾಯಣಸ್ವಾಮಿ ಅದರ ಆಚೆಗೆ ಹೋಗಿ ಟೀಕೆ ಮಾಡಿದ್ದಾರೆ. ಅದು ಅವರ ಯೋಗ್ಯತೆಯನ್ನು ತೋರಿಸುತ್ತದೆ ಎಂದು ರವಿಕುಮಾರ್ ಬಾಗಿ ಅವರು ಹೇಳಿದರು.

ಪ್ರಶ್ನೆ ಮಾಡಬೇಕಾದ ನಾರಾಯಣಸ್ವಾಮಿ ಮೌನ

ರುದ್ರ ಪುನೀತ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಲ್ಲರಿಗಿಂತಲೂ ಹೆಚ್ಚಾಗಿ ಛಲವಾದಿ ನಾರಾಯಣಸ್ವಾಮಿ ಅವರೇ ಪ್ರಶ್ನೆ ಮಾಡಬೇಕಾಗಿದೆ. ಮೀಸಲಾತಿ ವ್ಯವಸ್ಥೆ ಇರುವುದು ಸಾಮಾಜಿಕ ಸಮಾನತೆಗೆಯೇ ಹೊರೆತು ಆರ್ಥಿಕ ಸಮಾನತೆಗೆ ಅಲ್ಲ ಆದರೂ ಸಂವಿಧಾನದ ಆಶಯವನ್ನು ದಿಕ್ಕುತಪ್ಪಿಸಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ 10 ಶೇ. ಮೀಸಲಾತಿ ನೀಡಿರುವುದನ್ನು ನಾರಾಯಣಸ್ವಾಮಿ ಪ್ರಶ್ನಿಸಬೇಕಾಗಿದೆ. ದಲಿತರೆಂಬ ಕಾರಣಕ್ಕೆ ರಾಷ್ಟ್ರಪತಿಗಳನ್ನೂ ದೇವಸ್ಥಾನ ಪ್ರವೇಶಕ್ಕೆ ಬಿಜೆಪಿಯಿಂದ ಅವಕಶ ನಿರಾಕರಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಬೇಕಾದ ನಾರಾಯಣಸ್ವಾಮಿ ಮೌನವಾಗಿದ್ದಾರೆ. ಆದರೆ ಸಂವಿಧಾನದ ಚೌಕಟ್ಟಿನಲ್ಲಿ ಪ್ರಶ್ನೆ ಮಾಡುವ ದಲಿತ ನಾಯಕರನ್ನು ನಾಯಿಗೆ ಹೋಲಿಕೆ ಮಾಡಿರುವುದು ಅವರ ಗುಲಾಮತನದ ಪರಮಾವಧಿಯಾಗಿದೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ