Sunday, November 22, 2026

ಪ್ರಾಯೋಗಿಕ ಆವೃತ್ತಿ

ಮೋದಿಯವರಿಗೆ ಧರ್ಮವೂ ಗೊತ್ತಿಲ್ಲ- ಮಾನವೀಯತೆಯೂ ಇಲ್ಲ: ಡಾ.ಎಚ್.ವಿ.ವಾಸು

ಒಳಿತನ್ನು ಬಯಸುವ ಎಲ್ಲಾ ಧರ್ಮಗಳು ದಾನವನ್ನು ಪ್ರೋತ್ಸಾಹಿಸುತ್ತವೆ. ವಕ್ಫ್ ವಿರುದ್ಧ ಕಾಯ್ದೆ ತಂದಿರುವ ಮೋದಿಯವರಿಗೆ ಧರ್ಮವೂ ಗೊತ್ತಿಲ್ಲ ಮಾನವೀಯತೆಯೂ ಇಲ್ಲ ಎಂದು ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಡಾ. ವಾಸು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ನಗರದ ಷುಗರ್ ಟೌನ್ ಬಳಿಯ ಗಿರಿಜಾ ಚಿತ್ರಮಂದಿರದ ಮುಂಭಾಗದ ಆವರಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಉಳ್ಳವರು ತಮ್ಮಲ್ಲಿರುವ ಸಂಪತ್ತಿನ ಒಂದು ಭಾಗವನ್ನು ದೇವರ ಹೆಸರಿನಲ್ಲಿ ದಾನ ಮಾಡುವುದು ಎಲ್ಲಾ ಧರ್ಮದಲ್ಲಿಯೂ ಇದೆ. ಅದರಂತೆ ವಕ್ಫ್ ಧರ್ಮ, ಮಾನವೀಯತೆ ಮೇಲೆ ನಿಂತಿದೆ. ದೇವರ ಹೆಸರಿನಲ್ಲಿ ಕೊಟ್ಟ ದಾನ, ಧರ್ಮ, ಮಾನವೀಯತೆ ಬಗ್ಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಗೆ ಗೊತ್ತಿಲ್ಲ. ಬಿಜೆಪಿ ಮತ್ತು ಆರ್ ಎಸ್ ಎಸ್ ಎಂದಿಗೂ ಹಿಂದುತ್ವ ಹಾಗೂ ರಾಷ್ಟ್ರೀಯತೆ ಪ್ರತಿಪಾದಿಸುವುದಿಲ್ಲ.ಅದರಂತೆ ಮೋದಿಯವರಿಗೆ ಧರ್ಮವೂ ಗೊತ್ತಿಲ್ಲ ಮಾನವೀಯತೆಯೂ ಇಲ್ಲ.ಮುಸ್ಲಿಂ ಸಮುದಾಯ ಕೇವಲ ವಕ್ಫ್ ರಕ್ಷಣೆ ಮಾಡುವುದಕ್ಕಾಗಿ ಈ ಹೋರಾಟ ನಡೆಸುವುದಲ್ಲ.ವಕ್ಫ್ ಹೋರಾಟ ಎಂದರೆ ಈ ದೇಶದ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಯ ಹೋರಾಟವಾಗಿದೆ ಎಂದರು.

ಎಲ್ಲಾ ಧರ್ಮದವರನ್ನು ಒಂದಾಗಿ ನೋಡುವುದು ರಾಷ್ಟ್ರೀಯತೆ

ಈ ದೇಶದ ಆದಿವಾಸಿಗಳು, ದಲಿತರು, ಹಿಂದುಳಿದವರು, ಹಿಂದೂ, ಮುಸ್ಲಿಂ, ಕ್ರೈಸ್ತ,ಜೈನ ಸೇರಿದಂತೆ ಎಲ್ಲಾ ಧರ್ಮದವರನ್ನು ಒಂದಾಗಿ ನೋಡುವುದು ರಾಷ್ಟ್ರೀಯತೆ. ಆದರೆ ಬಿಜೆಪಿ ಮತ್ತು ಆರ್ ಎಸ್ ಎಸ್ ಪ್ರತಿಪಾದಿಸುತ್ತಿರುವುದು ರಾಷ್ಟ್ರೀಯತೆ ಅಲ್ಲ. ಒಂದು ಧರ್ಮದ ವಿರುದ್ಧ ನಿಂತಿರುವುದು ರಾಷ್ಟ್ರೀಯತೆಯೇ ಎಂದು ಪ್ರಶ್ನಿಸಿದರು.

1927 ಡಿಸೆಂಬರ್ 19ರಂದು ಈ ದೇಶದ ಸ್ವಾತಂತ್ರ್ಯಕ್ಕಾಗಿ ರಾಮಪ್ರಸಾದ್ ಬಿಸ್ಮಿಲ್ ಅವರ ಜೊತೆ ಅಶ್ವಾಖುಲ್ಲಾ ಖಾನ್ ಅವರು ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದಾರೆ.ಆದರೆ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಅವರು ಈ ದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರತಿನಿಧಿಸಿಲ್ಲ ಎಂದರು.

1950 ಜನವರಿ 26ರಲ್ಲಿ ಸಂವಿಧಾನ ಜಾರಿಗೆ ಬಂದಿತು. ಈ ದೇಶದಲ್ಲಿ ಸಂಸತ್ತು ದೊಡ್ಡದಲ್ಲ, ಸುಪ್ರೀಂಕೋರ್ಟ್ ದೊಡ್ಡದಲ್ಲ, ಸಂವಿಧಾನವೇ ದೊಡ್ಡದು ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಹೇಳಿದ್ದಾರೆ. ಸಂವಿಧಾನ ಉಳಿಸಲು ನಡೆಯುತ್ತಿರುವ ಹೋರಾಟ ಮಂಡ್ಯದಲ್ಲೂ ನಡೆಯುತ್ತಿದೆ ಎಂದರು.

ಎರಡನೇ ಸ್ವಾತಂತ್ರ್ಯ ಸಂಗ್ರಾಮ

ಕೋವಿಡ್ ಬರುವ ಮುನ್ನ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿದ್ದ ಸಿಎಎ,ಎನ್ ಆರ್ ಸಿ ವಿರುದ್ಧ ದೆಹಲಿಯ ಶಾಹೀನ್ ಬಾಗ್ ನಲ್ಲಿ ಮುಸ್ಲಿಂ ಸಮುದಾಯದ ಕೋಟ್ಯಾಂತರ ಮಹಿಳೆಯರು ಬೀದಿಗಿಳಿದು ಚಳುವಳಿ ನಡೆಸಿದರು.ಈ ಹೋರಾಟದ ಹಿನ್ನಲೆಯಲ್ಲಿ ಬಿಜೆಪಿ ಸರ್ಕಾರ ಸಿಎಎ,ಎನ್ಆರ್ ಸಿ ಜಾರಿಗೆ ತರಲಿಲ್ಲ. ಮುಸಲ್ಮಾನ ಮಹಿಳೆಯರು ಮಾಡಿದ ಈ ಹೋರಾಟ ರೈತ ಚಳುವಳಿಗೆ ಸ್ಪೂರ್ತಿಯನ್ನು ಕೊಟ್ಟಿದೆ.ಈಗ ಸುಪ್ರೀಂ ಕೋರ್ಟ್ ನಲ್ಲಿ ವಕ್ಫ್ ಮಸೂದೆ ವಿಚಾರಣೆ ನಡೆಯುತ್ತಿದೆ.ಸುಪ್ರೀಂ ಕೋರ್ಟ್ ಸಂವಿಧಾನದ ಆಶಯಗಳ ಪರವಾಗಿಯೇ ಇರುತ್ತದೆ ಎಂದು ತಿಳಿಸಿದರು.

ಬಿಜೆಪಿಯ ವಕ್ಫ್ ಕಾಯ್ದೆ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ದಲಿತರ ನಡುವೆ ಯಾವುದೇ ತಾರತಮ್ಯ ಮಾಡಬಾರದು.ಆದರೆ ಬಿಜೆಪಿ ಸರ್ಕಾರ ಅದನ್ನು ಮಾಡುತ್ತಿದೆ. ಯಾರು ಬೇಕಾದರೂ ದಾನ ಮಾಡುವ ಹಕ್ಕು ಇದೆ.ಬಸವ ಧರ್ಮ,ಲಿಂಗಾಯತ ಧರ್ಮದ ದಾಸೋಹ,ಮುಸ್ಲಿಂ ಧರ್ಮದ ವಕ್ಫ್,ಜಕಾತ್ ಬಗ್ಗೆ ಬಿಜೆಪಿ, ಆರ್ ಎಸ್ ಎಸ್ ಗೆ ಗೊತ್ತಿಲ್ಲ. ವಕ್ಫ್ ಮಾನವೀಯತೆಯ ಮೇಲೆ ನಿಂತಿದೆ. ಸಂವಿಧಾನದ 15,16 26 ಕಲಂ ಪ್ರಕಾರ ವಕ್ಫ್ ಮಸೂದೆಯಲ್ಲಿ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯದ ಹಿರಿಮೆ ಸಾರಿದ ಬಾನು ಮುಷ್ತಾಕ್

ಕನ್ನಡತಿ ಭಾನು ಮುಷ್ತಾಕ್ ಅವರಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದೆ. ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಹಿರಿಮೆಯನ್ನು ಜಗತ್ತಿನಲ್ಲಿ ಸಾರಿದ್ದಾರೆ. ಅವರನ್ನು ಶ್ಲಾಘಿಸಿ ನರೇಂದ್ರ ಮೋದಿಯವರಿಗೆ ಒಂದು ಲೈನ್ ಬರೆಯಲು ಕೂಡ ಆಗಿಲ್ಲ. ಬಿಜೆಪಿ,ಆರ್ ಎಸ್ ಎಸ್ ಅವರಿಗೆ ಈ ದೇಶದ ಸಂವಿಧಾನವೇ ಗೊತ್ತಿಲ್ಲ.ಜಕಾತ್, ದಾನ, ಧರ್ಮದ ಬಗ್ಗೆ ಗೊತ್ತಿಲ್ಲ.ಮುಸ್ಲಿಂ ಸಮುದಾಯದ ಏಳಿಗೆಗಾಗಿ, ಶಿಕ್ಷಣ, ಆರೋಗ್ಯ ಹಾಗೂ ಅಶಕ್ತರಿಗೆ ಸಹಾಯ ಮಾಡಲು ಬಳಸಲಾಗುತ್ತದೆ.ವಕ್ಫ್ ಬೋರ್ಡಿನಲ್ಲಿ ಭ್ರಷ್ಟಾಚಾರ,ಸ್ವಜನ ಪಕ್ಷಪಾತ ಕೂಡ ಇದೆ. ಅದನ್ನು ಸರಿಪಡಿಸುವ ಕೆಲಸ ಮಾಡಲಿ. ಈ ದೇಶದಲ್ಲಿ ಅಂಬಾನಿ, ಅದಾನಿಯವರಿಗೆ ಒಂದು ಕಾನೂನು ಇತರ ಧರ್ಮದವರಿಗೆ ಇನ್ನೊಂದು ಕಾನೂನು ಇದೆ ಎಂದರು.

ಹೋರಾಟ ಅನಿವಾರ್ಯ

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ,ಅಂಬಾನಿ ಮತ್ತು ಅದಾನಿಯ ವ್ಯಾಪಾರಕ್ಕಾಗಿ ವಕ್ಫ್ ಕಾಯ್ದೆ ತಂದಿದ್ದಾರೆ.ಇದರ ವಿರುದ್ಧ ಮುಸ್ಲಿಂ ಸಮುದಾಯ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ.ಬಿಜೆಪಿ ಸರ್ಕಾರ ಕೇವಲ ಅಧಿಕಾರಕ್ಕಾಗಿ ಮುಸ್ಲಿಂ ಸಮುದಾಯವನ್ನು ಇತರ ಸಮುದಾಯದಿಂದ ಬೇರ್ಪಡಿಸಿ ದ್ವೇಷ ಹಬ್ಬಿಸುತ್ತಿದ್ದಾರೆ ಎಂದರು.

ಕೇವಲ ಬೂಟಾಟಿಕೆ

ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮುಜೀದ್ ಮಾತನಾಡಿ,ವಕ್ಫ್ ಮಸೂದೆ ತಿದ್ದುಪಡಿ ಬಡ ಮುಸಲ್ಮಾನರ ಸಹಾಯಕ್ಕೆ ಎಂದು ಮೋದಿಯವರು ಹೇಳುತ್ತಿದ್ದಾರೆ.ಆದರೆ ಮುಸ್ಲಿಂ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್ಶಿಪ್ ರದ್ದು ಮಾಡಿದ್ದಾರೆ.ಅವರಿಗೆ ಬಜೆಟ್ ನಲ್ಲಿ ಇಟ್ಟಿದ್ದ ಅನುದಾನ ಕಡಿತ ಮಾಡಿದ್ದಾರೆ.ಇದು ಮುಸ್ಲಿಂ ಸಮುದಾಯಕ್ಕೆ ಮಾಡುತ್ತಿರುವ ಸಹಾಯನಾ ಎಂದು ಪ್ರಶ್ನಿಸಿದ ಅವರು,ವಕ್ಫ್ ಮಸೂದೆ ತಿದ್ದುಪಡಿ ಬಡ ಮುಸ್ಲಿಂರಿಗಾಗಿ ಎನ್ನುವುದು ಕೇವಲ ಬೂಟಾಟಿಕೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬರಲು ಹಿಂದೂ-ಮುಸ್ಲಿಂ ಅಜೆಂಡಾ ಬೇಕು. ಅದಕ್ಕಾಗಿ ವಕ್ಫ್ ತಿದ್ದುಪಡಿ ಮಾಡಿದ್ದಾರೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಸಮುದಾಯ ಪ್ರಾಣ ತ್ಯಾಗ ಮಾಡಿದ್ದಾರೆ. ಈ‌ ದೇಶದ ಮಕ್ಕಳು ನಾವು.ಈ ದೇಶ ಯಾರಪ್ಪನ ಸ್ವತ್ತೂ ಅಲ್ಲ.ಇದು ನಮ್ಮ ದೇಶ.ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ.ವಕ್ಫ್ ವಿರುದ್ಧದ ಹೋರಾಟ ಮುಂದುವರೆಯಲಿಯದೆ ಎಂದರು.

ಸಂವಿಧಾನಕ್ಕೆ ಧಕ್ಕೆ

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಮಾತನಾಡಿ,ವಕ್ಫ್ ಮಸೂದೆ ತಿದ್ದುಪಡಿ ಮಾಡುತ್ತಿರುವುದು ಬಂಡವಾಳಶಾಹಿಗಳಿಗೆ.ಈ ಮಸೂದೆ ಜಾರಿಯಾದರೆ ನಮಾಜ್ ಮಾಡಲು ಮಸೀದಿ,ಹೆಣ ಹೂಳಲು ಖಬರಸ್ತಾನ್ ಕೂಡ ಇರಲ್ಲ.ಈಗ ಬಿಜೆಪಿ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದು,ಈ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಇಫ್ತೆಕಾರ್ ಅಹಮದ್, ಹಾಮಿದುಲ್ ಹಸನ್ ಸಾಹೇಬ್, ರಿಜ್ವಾನ್ ಅಹ್ಮದ್, ಜಬೀವುಲ್ಲಾ, ಅಮ್ಜದ್ ಪಾಷ, ಜಾಗೃತ ಕರ್ನಾಟಕದ ಸುಹೇಲ್ ಅಹಮದ್, ಮೋಹನ್, ಜಿ.ಸಂತೋಷ್, ಕೃಷ್ಣ ಪ್ರಕಾಶ್, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಪೂರ್ಣಿಮಾ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ