13-07-2022ರಂದು ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಮಂಡ್ಯ ನಗರದ ಗುತ್ತಲು ಬಡಾವಣೆಯ ಸಾದತ್ ನಗರದ ಎಂ.ಸಿ. ರಸ್ತೆಯಲ್ಲಿರುವ ಸ್ಟಾರ್ ಆಟೋ ಪಾರ್ಟ್ಸ್ ಮುಂಭಾಗ ನಿಲ್ಲಿಸಿದ್ದ ಆಶೋಕ್ ಲೇಲ್ಯಾಂಡ್ ಕೆಎ-40 6862 ನಂಬರ್ ಲಾರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದಿನಾಂಕ:15-17-2022ರಂದು ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿ ಮತ್ತು ಮಾಲು ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಮಂಡ್ಯ ಡಿವೈಎಸ್ಪಿಯವರು ಮತ್ತು ಮಂಡ್ಯ ನಗರ ವೃತ್ತದ ಸಿಪಿಐ ರವರ ಸಂತೋಷ್ ಅವರ ಉಸ್ತುವಾರಿಯಲ್ಲಿ ಮಂಡ್ಯ ಪೂರ್ವ ಠಾಣೆಯ ಪಿ.ಎಸ್.ಐ ರವರುಗಳಾದ ರಮೇಶ್ ಕರಕಿಕಟ್ಟಿ ಮತ್ತು ಕೆ.ಪಿ. ಕೇಶವಮೂರ್ತಿ ರವರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಸದರಿ ಪ್ರಕರಣದ 2 ನೇ ಆರೋಪಿಯನ್ನು ದಿನಾಂಕ:-16-07-2022 ರಂದು ಮೈಸೂರು ಸಿಟಿ ನಾರಾಯಣ ಹೃದಯಾಲಯ ಆಸ್ಪತ್ರೆ ಬಳಿಯ ಆಟೋ ನಿಲ್ದಾಣದ ಹತ್ತಿರ ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿ ಆರೋಪಿಯಿಂದ ಸುಮಾರು 10,00,000/- ರೂ. (ಸುಮಾರು ಹತ್ತು ಲಕ್ಷ ರೂ ಮೌಲ್ಯದ ಗ್ಯಾಸ್ ಕಟಿಂಗ್ ಮಾಡಿದ್ದ ಲಾರಿಯ ಬಿಡಿಭಾಗಗಳನ್ನು ವಶಪಡಿಸಿಕೊಂಡಿರುತ್ತದೆ.
ಪ್ರಕರಣದ 1 ನೇ ಆರೋಪಿಯು ಮಂಡ್ಯದಿಂದ ಲಾರಿಯನ್ನು ಕಳ್ಳತನ ಮಾಡಿ ಆರೋಪಿ 2 ರವರಿಗೆ ನೀಡಿದ್ದು, ಆರೋಪಿ 2 ಹೆಬ್ಬಾಡಿ ಬಳಿ, ಖಾಲಿ ಜಮೀನಿನಲ್ಲಿ ಸದರಿ ಲಾರಿಯನ್ನು ಗ್ಯಾಸ್ ಕಟ್ಟರ್ ಮೂಲಕ ಕಟ್ ಮಾಡಿ ಬಿಡಿ ಭಾಗಗಳಾಗಿ ಬೇರ್ಪಡಿಸಿರುವುದಾಗಿ ತಿಳಿದು ಬಂದಿರುತ್ತದೆ.
ಸದರಿ ಪ್ರಕರಣದ 2ನೇ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು’ಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಈ ಪತ್ತೆ ಕಾರ್ಯದ ತಂಡವನ್ನು ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಅಭಿನಂದಿಸಿದ್ದಾರೆ




