ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ (AILU) ನೇತೃತ್ವದಲ್ಲಿ ರಾಜ್ಯದ ಎಲ್ಲ ವಕೀಲರು ಶುಕ್ರವಾರ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ವಕೀಲರ 13 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಅಧ್ಯಕ್ಷ ಬಿ.ಟಿ. ವಿಶ್ವನಾಥ್, ರಾಜ್ಯ ಸಮಿತಿಯ ಸದಸ್ಯರಾದ ತಿಮ್ಮೇಗೌಡ, ಆರ್ ಜಗನ್ನಾಥ್ ಮತ್ತು ನ್ಯಾಯವಾದಿಗಳಾದ ಎಂ ಮಹೇಶ್ ಯೋಗೇಶ್ ,ಸುನಿಲ್, ಕಿಶೋರ್, ವಕೀಲರಾದ ಕೆಂಪಯ್ಯ ಅವರನ್ನೊಳಗೊಂಡ ತಂಡವು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿತು.
ಪೊಲೀಸರ ಏಕ ಪಕ್ಷಿಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಲು ವಕೀಲರ ರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಬೇಕು, ವಕೀಲರ ಸಂಘಗಳಿಗೆ ಅನುದಾನ ನೀಡಬೇಕು, ವಕೀಲರಿಗೆ ಜೀವವಿಮೆ ಮತ್ತು ವೈದ್ಯಕೀಯ ವಿಮೆ ಒದಗಿಸಿಕೊಡಬೇಕು, ಎಸಿಡಿಸಿ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ನ್ಯಾಯಾಲಯಗಳಲ್ಲಿ ಪರಿಸ್ಥಿತಿ ತೀರ ಹದಗೆಟ್ಟಿದ್ದು ಅಲ್ಲಿನ ಪ್ರಕರಣಗಳನ್ನು ಪಾರದರ್ಶಕ ತೀರ್ಪಿಗಾಗಿ ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಬೇಕೆಂದು ಒತ್ತಾಯಿಸಲಾಯಿತು.
ವಕೀಲರಿಗೆ ಟೋಲ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಬೇಕು. ನ್ಯಾಯಾಲಯದ ಆವರಣದಲ್ಲಿ ವಕೀಲರ ಚೇಂಬರ್ ಗಳಿಗೆ ಸ್ಥಳಾವಕಾಶ ನೀಡಬೇಕು. ಕಕ್ಷಿದಾರರು ಕುಳಿತು ವಿರಮಿಸಲು ಶೆಲ್ಟರ್ ಗಳು, ಗ್ರಂಥಾಲಯಗಳನ್ನು ಮತ್ತು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ಕಾನೂನು ಕಾಲೇಜು ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ತ್ವರಿತವಾಗಿ ಸರಕಾರಿ ಕಾನೂನು ಕಾಲೇಜು, ಸರಕಾರಿ ಪಾಲಿಟೆಕ್ನಿಕ್ ಮತ್ತು ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕೆಂದು ಕೂಡ ವಕೀಲರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು




