Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಸ್ಲಂ ಬೋರ್ಡ್ ನಿರ್ಮಿಸಿದ್ದ ಮನೆಗಳಿಗೆ ಅಕ್ರಮ ಪ್ರವೇಶ : ತೆರವುಗೊಳಿಸಿದ ಜಿಲ್ಲಾಡಳಿತ

ಮಂಡ್ಯನಗರದ ಚಿಕ್ಕಮಂಡ್ಯ ಕೆರೆ ಅಂಗಳದಲ್ಲಿ ಬೀಡಿ ಕಾರ್ಮಿಕರ ಕಾಲೋನಿ ಪಕ್ಕದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿದ್ದ ಮನೆಗಳಿಗೆ ಇಂದು ಮಧ್ಯಾಹ್ನ ನೂರಾರು ಜನರು ಅಕ್ರಮವಾಗಿ ಪ್ರವೇಶ ಮಾಡಿದ್ದನ್ನು ತಿಳಿದ ಅಧಿಕಾರಿಗಳು ಅವರ ಮನವೊಲಿಸಿ ತೆರವು ಮಾಡಿಸುವಲ್ಲಿ ಯಶಸ್ವಿಯಾದರು.

ಇಂದು ಮಧ್ಯಾಹ್ನ ಕೆರೆ ಅಂಗಳದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ನಿರ್ಮಿಸಿರುವ 576 ಮನೆಗಳಿಗೆ ಏಕಾಏಕಿ ಪ್ರವೇಶಿದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ನೆಲೆಸಿರುವ ನೂರಾರು ಅಲ್ಪಸಂಖ್ಯಾತ ಸಮುದಾಯದ ಜನರು ಬೀಗಗಳನ್ನು ಒಡೆದು ಅಕ್ರಮವಾಗಿ ಪ್ರವೇಶ ಮಾಡಿದರು.

ದೂರು ದಾಖಲು

ಇದನ್ನು ತಿಳಿದ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಕೆರೆ ಅಂಗಳದಲ್ಲಿರುವ ಸೆಂಟ್ರಲ್ ಪೋಲಿಸ್ ಠಾಣೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ ಜನರ ವಿರುದ್ದ ದೂರು ಸಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಜನರಿಗೆ ಈ ರೀತಿ ಅಕ್ರಮವಾಗಿ ನೆಲೆಸಿರುವುದು ತಪ್ಪು. ಕಾನೂನಿನ ಪ್ರಕಾರ ಈ ಪ್ರವೇಶ ಅಕ್ರಮ ಎಂದು ತಿಳಿ ಹೇಳಿದ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಡಿವೈಎಸ್ಪಿ ಲಕ್ಮೀ ನಾರಾಯಣ್, ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಇ ಜಫ್ರುಲ್ಲಾ, ಎಇಇ ಕುಮಾರ ಈಶ್ವರ್ ಮೊದಲಾದ ಅಧಿಕಾರಿಗಳ ತಂಡ ಜನರಿಗೆ ವಾಸ್ತವ ವಿಚಾರವನ್ನು ಮನವರಿಕೆ ಮಾಡಿಕೊಟ್ಟು ಅವರ ಮನವೊಲಿಸಿ ಅಕ್ರಮವಾಗಿ ಪ್ರವೇಶ ಮಾಡಿದ್ದ ಜನರನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು.

ಕೆಲವರ ಚಿತಾವಣೆಯಿಂದ ಆಧಾರ್ ಕಾರ್ಡ್ ಹಿಡಿದುಕೊಂಡು ತಮಿಳು ಕಾಲೋನಿ ನಿವಾಸಿಗಳಿಗೆ ನಿರ್ಮಿಸಿದ್ದ ಮನೆಗಳಿಗೆ ಪ್ರವೇಶ ಮಾಡಿದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಬಾಡಿಗೆಗೆ ವಾಸವಿದ್ದ ಅಲ್ಪಸಂಖ್ಯಾತ ಸಮುದಾಯದ ಜನರು ತಾವೇ ಪ್ರತ್ಯೇಕವಾಗಿ ಮತ್ತೊಂದು ಬೀಗವನ್ನು ಹಾಕಿಕೊಂಡರೆ,  ಇನ್ನೂ ಕೆಲವರು ಒಳಗೆ ಕುಳಿತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಬಂದ ಅಧಿಕಾರಿಗಳಿಗೆ ನಾವು ಹಲವು ವರ್ಷಗಳಿಂದ ಬಾಡಿಗೆ ಕಟ್ಟಿಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ನಿವೇಶನ ನೀಡುವಂತೆ ಈಗಾಗಲೇ ವಿವಿಧ ಇಲಾಖೆಗಳಿಗೆ ಮನವಿ ಪತ್ರ ನೀಡಿದ್ದೇವೆ. ಇಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ನಿರ್ಮಿಸಿರುವ ಮನೆಗಳು ಹಲವಾರು ವರ್ಷಗಳಿಂದ ಖಾಲಿ ಬಿದ್ದಿದೆ. ಗಾಂಜಾ, ಡ್ರಗ್ಸ್ ಮೊದಲಾದ ಮಾದಕ ದ್ರವ್ಯಗಳನ್ನು ಸೇವಿಸುವವರಿಗೆ ಈ ಮನೆಗಳು ಅಕ್ರಮ ತಾಣಗಳಾಗಿವೆ. ಈ ರೀತಿ ಅಕ್ರಮ ಚಟುವಟಿಕೆ ನಡೆಯುವ ಬದಲು, ಈ ಮನೆಗಳನ್ನು ನಮಗೆ ನೀಡಿದರೆ ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತೇವೆ. ಮನೆ ಇಲ್ಲದೆ ನಿರ್ಗತಿಕರಾದ ನಮಗೆ ಮನೆಗಳನ್ನು ನೀಡಿ ಎಂದು ಅಲವತ್ತು ಕೊಂಡರು.

ತಡೆಯಾಜ್ಞೆ

ಇದಕ್ಕೆ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಈ ಮನೆಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕೋಟ್ಯಾಂತರ ರೂ.ವೆಚ್ಚದಲ್ಲಿ ಮಂಡ್ಯ ಜಿಲ್ಲಾ ಆಸ್ಪತ್ರೆಯ ಪಕ್ಕದಲ್ಲಿರುವ ತಮಿಳು ಕಾಲೋನಿ ನಿವಾಸಿಗಳಿಗೆ ನಿರ್ಮಿಸಿದೆ. ತಮಿಳು ಕಾಲೋನಿ ನಿವಾಸಿಗಳು ಹೈಕೋರ್ಟ್ ನಲ್ಲಿ ನಮಗೆ ಈಗಿರುವ ಜಾಗದಲ್ಲಿಯೇ ಮನೆ ಕಟ್ಟಿ ಕೊಡಬೇಕೆಂದು ಕೇಸು ದಾಖಲಿಸಿದ್ದು, ಹಂಚಿಕೆ ಸಂಬಂಧ ತಡೆಯಾಜ್ಞೆ ಇದೆ. ಇನ್ನು ಕೆಲವೇ ದಿನಗಳಲ್ಲಿ ಈ ತಡೆಯಾಜ್ಞೆಯನ್ನು ಹೈಕೋರ್ಟ್ ತೆರುವುಗೊಳಿಸಲಿದ್ದು, ನಂತರ ಸರ್ಕಾರ ತಮಿಳು ಕಾಲೋನಿಯ ನಿವಾಸಿಗಳ ಫಲಾನುಭವಿಗಳ ಪಟ್ಟಿಯಂತೆ ಈ ಮನೆಗಳನ್ನು ಅವರಿಗೆ ಹಂಚಿಕೆ ಮಾಡಲಿದೆ ಎಂದು ತಿಳಿಸಿದರು.

ನೀವು ಈ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವುದು ಕಾನೂನುಬಾಹಿರ ಎಂದು ತಿಳಿಸಿ,ಅಕ್ರಮವಾಗಿ ಪ್ರವೇಶ ಮಾಡಿದ್ದ ಜನರ ಮನವೊಲಿಸಿ ಅಲ್ಲಿಂದ ಹೊರ ಕಳುಹಿಸಿದರು. ತಪ್ಪು ಮಾಹಿತಿ ನೀಡಿ ಈ ರೀತಿಯ ಪ್ರಹಸನಕ್ಕೆ ಕಾರಣರಾದ ವ್ಯಕ್ತಿಗಳ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಲಿ ಎಂದು ಸ್ಥಳಕ್ಕೆ ಬಂದಿದ್ದ ವಿವಿಧ ಸಂಘಟನೆಗಳ ನಾಯಕರು ಆಗ್ರಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ