ಕಂಪನಿಯಿಂದ ಸಾಲ ಪಡೆದ ಗ್ರಾಹಕರಿಂದ ಬಲವಂತದ ಸಾಲ ವಸೂಲಿ ಯತ್ನಿಸಿದ ಬಜಾಜ್ ಪಿನ್ಸರ್ವ್ ಮೈಕ್ರೋ ಫೈನಾನ್ಸ್ ಕಂಪನಿಯ ಸೆಂಟರ್ ಮ್ಯಾನೇಜರ್ ಒಬ್ಬನನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಪೊಲೀಸರು ಬಂಧಿಸಿದ್ದು, ಆತನ ವಿರುದ್ದ ‘ಕರ್ನಾಟಕ ಸೂಕ್ಷ್ಮ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ತಡೆಗಟ್ಟುವಿಕೆ) ಸುಗ್ರೀವಾಜ್ಞೆ 2025‘ ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದ ಬಜಾಜ್ ಪಿನ್ಸರ್ವ್ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಸೆಂಟರ್ ಮ್ಯಾನೇಜರ್ ಆಗಿರುವ ಅಜಿತ್ ಪಿ. ಬಿನ್ ಪುಟ್ಟರಾಜು (32) ಬಂಧಿತ ವ್ಯಕ್ತಿ. ಈತ ಮೂಲತಃ ಕೊಳ್ಳೇಗಾಲ ತಾಲ್ಲೂಕಿನ ಸಿಲ್ಕಲ್ ಪುರ ಗ್ರಾಮದವನಾಗಿದ್ಧಾನೆ.
ಇದು ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸೂಕ್ಷ್ಮ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ತಡೆಗಟ್ಟುವಿಕೆ) ಸುಗ್ರೀವಾಜ್ಞೆ 2025 ರ ಅಡಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣವಾಗಿದೆ.
ಏನಿದು ಘಟನೆ ?
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿ ಜಾಲಹಳ್ಳಿ ಗ್ರಾಮದ ನವೀನ ಬಿನ್ ಲೇಟ್ ಬಸವಶೆಟ್ಟಿ ಎನ್ನುವ ವ್ಯಕ್ತಿ ತನ್ನ ತಾಯಿ ಮಂಗಳಮ್ಮ ಅವರ ಹೆಸರಿನಲ್ಲಿ ಟಿ.ನರಸೀಪುರ ಶಾಖೆಯ ಬಜಾಜ್ ಮೈಕ್ರೋ ಪೈನಾನ್ಸ್ ಕಂಪನಿಯಲ್ಲಿ 40 ಸಾವಿರ ಸಾಲ ಪಡೆದುಕೊಂಡಿದ್ದರು. ಪ್ರತಿ ತಿಂಗಳು ಸಾಲದ ಕಂತನ್ನು ಕಟ್ಟಿಕೊಂಡು ಬರುತ್ತಿದ್ದರು.
ಆದರೆ ಕಳೆದ ಜೂ.16 ರಂದು ಗ್ರಾಹಕ ನವೀನ್ ತನ್ನ ಸಂಬಂಧಿಗಳು ಇರುವ ಪೂರಿಗಾಲಿ ಗ್ರಾಮದ ಶೋಭ ಅವರ ಮನೆಗೆ ತನ್ನ ಹೆಂಡತಿ ಪ್ರಮೀಳ ಹಾಗೂ ಮಗಳು ದೀಕ್ಷಾ ಅವರೊಂದಿಗೆ ಬಂದಿದ್ದರು. ಅದೇ ದಿನ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ನಡುವಿನ ಸಮಯದಲ್ಲಿ ಆರೋಪಿ ಮೈಕ್ರೋ ಪೈನಾನ್ಸ್ ಕಂಪನಿಯ ಅಜಿತ್ ಎಂಬುವನು ಪೂರಿಗಾಲಿ ಗ್ರಾಮದ ಮನೆಯ ಬಳಿ ಬಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನವೀನ್ ಅವರ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು, ನವೀನ್ ಅವರ ಮಗಳಾದ ಅಪ್ರಾಪ್ತ ವಯಸ್ಸಿನ ದೀಕ್ಷಾ ಮತ್ತು ಪಕ್ಕದ ಮನೆಯ ಆಪ್ರಾಪ್ತ ವಯಸ್ಸಿನ ಹುಡುಗ ಸಿದ್ದರಾಜು ಅವರನ್ನು ಪೋಷಕರ ಅನುಮತಿ ಇಲ್ಲದೆ ಬಲವಂತವಾಗಿ ಜೊತೆಯಲ್ಲಿ ಸಾಲ ಪಡೆದವರನ್ನು ತೋರಿಸುವಂತೆ ಕರೆದುಕೊಂಡು ಹೋಗಿದ್ದ. ನಂತರ ವಾಪಸ್ ಮನೆ ಬಳಿಗೆ ಕರೆದುಕೊಂಡು ಬಂದು ಬಿಟ್ಟಿದ್ದ.
ಸಾಲದ ಹಣವನ್ನು ಕಟ್ಟುವಂತೆ ಒತ್ತಾಯ ಮಾಡಿ ತಮಗೆ ಮತ್ತು ಕುಟುಂಬದವರಿಗೆ ತೊಂದರೆ ನೀಡಿದ ಬಗ್ಗೆ ಟಿ.ನರಸೀಪುರ ಬಜಾಜ್ ಮೈಕ್ರೋ ಪೈನಾನ್ಸ್ ಕಂಪನಿಯ ಮ್ಯಾನೇಜರ್ ಮತ್ತು ಅಜಿತ್ ಎಂಬ ವ್ಯಕ್ತಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಜೂ.20ರಂದು ರಾತ್ರಿ ನವೀನ್ ಎಂಬುವವರು ಬೆಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಆರೋಪಿಯ ವಿರುದ್ದ ಮೊ.ಸಂಖ್ಯೆ 53/2025 500: ಕಲಂ 137(2), 504, 3(5) ಬಿಎನ್ಎಸ್ ಜೊತೆ ಕಲಂ 8, 12 The Karnataka Micro Loan And Small Loan (Prevention of Coercive Actions) Ordinance 2025 Dm ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದ ಆರೋಪಿ ಪತ್ತೆಗಾಗಿ ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್ ಬಿ.ಎಸ್ ಅವರ ನೇತೃತ್ವದಲ್ಲಿ ಬೆಳಕವಾಡಿ ಪೊಲೀಸ್ ಠಾಣಾ ಪಿಎಸ್ಐ ಪ್ರಕಾಶ್ ಬಿ.ವಿ., ಕಿರುಗಾವಲು ಪೊಲೀಸ್ ಠಾಣಾ ಪಿಎಸ್ಐ ರವಿಕುಮಾರ್, ಸಿ.ಹೆಚ್.ಸಿಯವರಾದ ನಾಗೇಂದ್ರ, ರಿಯಾಜ್ ಪಾಷ, ನಿಂಗರಾಜು, ರವಿಕಿರಣ್, ಲೋಕೇಶ್ ಮತ್ತು ಸಿ.ಪಿ.ಸಿ ಯವರಾದ ಸಿದ್ದರಾಜು, ಶಿವಕುಮಾರ್, ಸುಜನ್ ಮನೋಹರ್ ಶರ್ಮ, ಮಹೇಶ, ಅನಿನಾಶ್, ಮಧುಕಿರಣ್ ಮಲ್ಲಿಕಾರ್ಜುನ ಚುಳುಕಿ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ತಮಿಳುನಾಡಿನ ಬಣ್ಣಾರಿ ಆಮ್ಮ ದೇವಸ್ಥಾನದ ಬಳಿ ಪತ್ತೆಮಾಡಿ ಮಾಡಿ ವಶಕ್ಕೆ ಪಡೆದುಕೊಂಡು ಬಂದು ವಿಚಾರಣೆ ನಡೆಸಿದೆ, ಆರೋಪಿಯು ಕೃತ್ಯ ದಿನ ಬಳಸಿದ್ದ ಒಂದು ಬೈಕ್ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹಲಗೂರು ವೃತ್ತದ ಪೊಲೀಸ್ ಠಾಣಾ ಅಧಿಕಾರಿ, ಸಿಬ್ಬಂದಿಯವರನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿಯವರು ಪ್ರಶಂಸಿಸಿ, ಶ್ಲಾಘಿಸಿದ್ದಾರೆ.




