ಸರ್ವಧರ್ಮದವರು ಒಗ್ಗೂಡಿ ಡಿ.೧೮ರಿಂದ ಮಳವಳ್ಳಿಯಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ೧೦೬೬ರ ಜಯಂತಿಯನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದು ಸುತ್ತೂರು ಮಠದ ಮಠಾಧೀಪತಿ ಶಿವರಾತ್ರಿ ದೇಶಿ ಕೇಂದ್ರ ಸ್ವಾಮಿಜಿ ತಿಳಿಸಿದರು.
ಮಳವಳ್ಳಿ ಪಟ್ಟಣದಲ್ಲಿ ನಡೆಯಲಿರುವ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ೧೦೬೬ರ ಜಯಂತಿ ಕಾರ್ಯಕ್ರಮದ ಪೂರ್ವಭಾವಿಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಕೊನೆಯುಸಿರುವವರೆಗೂ ಶಾಶ್ವತವಾಗಿ ನೆನೆಪು ಉಳಿಯುವಂತಹ ಜಯಂತಿ ತಾಲ್ಲೂಕಿನಲ್ಲಿ ನಡೆಯಲಿ, ಜಯಂತಿಯಲ್ಲಿ ಉಳಿದ ಹಣದ ಜೊತೆಗೆ ಮಠದ ಅನುದಾನದಲ್ಲಿ ತಾಲ್ಲೂಕಿನ ಐತಿಹಾಸಿಕ ಸ್ಥಳವೊಂದನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲಾಗುವುದೆಂದು ತಿಳಿಸಿದರು.
ಜಯಂತಿ ಯಶಸ್ವಿಗೆ ಪ್ರತಿಯೊಬ್ಬರ ಸಲಹೆ ಸಹಕಾರ ಅತಿ ಮುಖ್ಯವಾಗಿದೆ, ಜವಾಬ್ದಾರಿಯನ್ನು ಹಂಚಲು ಹಲವು ತಂಡಗಳ ಒಳಗೊಂಡಂತೆ ಸಮಿತಿ ರಚನೆ ಮಾಡಲಾಗುವುದು, ಸಮಿತಿಯಲ್ಲಿ ಸೇರಿಸಿಲ್ಲ ಎಂಬ ಕಾರಣಕ್ಕೆ ಬೇಸರ ಮಾಡಿಕೊಳ್ಳಬಾರದು. ಎಲ್ಲಾರು ಶ್ರೀಮಠದ ಭಕ್ತರೆಂದು ತಿಳಿದು ಯಶಸ್ವಿಗೆ ಕೈಜೋಡಿಸಬೇಕೆಂದು ಹೇಳಿದರು.
ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ ಎಲ್ಲಾರ ಒಗ್ಗೂಡುವಿಕೆ ಹಾಗೂ ಸಹಕಾರದೊಂದಿಗೆ ಶಿವರಾತ್ರೀಶ್ವರ ಶಿವಯೋಗಿ ಸ್ವಾಮಿಜಿಗಳ ಜಯಂತಿಯನ್ನು ಆಚರಿಸುವುದರ ಮೂಲಕ ಸ್ವಾಮಿಜಿಗಳ ಆರ್ಶೀವಾದ ಪಡೆಯುವ ಅವಕಾಶ ತಾಲ್ಲೂಕಿಗೆ ಸಿಕ್ಕಿರುವುದು ಸೌಭಾಗ್ಯವಾಗಿದೆ, ಸರ್ವಧರ್ಮದವರನ್ನು ಸಮಾನಾಗಿ ಕಾಣುವ ಸುತ್ತೂರು ಮಠ ಹಲವು ಸೇವೆಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದೆ ಎಂದರು.
ಶಿವರಾತ್ರಿದೇಶಿಕೇಂದ್ರ ಸ್ವಾಮಿಜಿ ಅವರ ಮಾರ್ಗದರ್ಶನ ಹಾಗೂ ತಿಳುವಳಿಕೆಗೆ ಬದ್ದರಾಗಿ, ಜಾತಿ ಹಾಗೂ ಪಕ್ಷ ಬೇದ ಮರೆತು ನನ್ನ ಜವಾಬ್ದಾರಿಯಲ್ಲಿ ಅರ್ಥಪೂರ್ಣ ಜಯಂತಿಯನ್ನು ಆಚರಿಸಲು ಶ್ರಮವಹಿಸಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಎರಡನೇ ಬಾರಿಗೆ ಜಿಲ್ಲೆಯಲ್ಲಿ ಜಯಂತೋತ್ಸವ ಆಚರಣೆ ಭಾಗ್ಯ ಸಿಕ್ಕಿದೆ. ಎಲ್ಲರ ಸಹಕಾರ ಮತ್ತು ಶ್ರಮದಿಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜಕೀಯ ಬಂದಾಗ ಮಾಡೋಣ ನರೇಂದ್ರಸ್ವಾಮಿ ನಾನು ಆತ್ಮೀಯರು, ಆದರೆ ಪಕ್ಷ ಅಂದಾಗ ಬೇರೆ. ಗ್ರಾಮೀಣ ಭಾಗದ ಭಕ್ತರ ಆಶ್ತೋತರಗಳಿಗೆ ಪೂರಕವಾಗಿ ಸುತ್ತೂರಿನ ವೈಭೋಗವನ್ನು ಮಳವಳ್ಳಿಯಲ್ಲಿ ಮರುಕಳಿಸುವಂತೆ ಮಾಡುವ ನಿಟ್ಟಿನಲ್ಲಿ ಯಾವುದೇ ಗೊಂದಲವಾಗದAತೆ ನಾನು ಮತ್ತು ಮರಿತಿಬ್ಬೇಗೌಡ ಕೊಂಡಿಯಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ಡಾ. ಕೆ ಅನ್ನದಾನಿ ಮಾತನಾಡಿ, ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರು ಸ್ಪರ್ಶ ಮಾಡಿದ ಐತಿಹಾಸಿಕ ಸ್ಥಳವಾಗಿರುವ ಮಳವಳ್ಳಿಯಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ೧೦೬೬ರ ಜಯಂತಿ ಆಚರಿಸುತ್ತಿರುವುದು ಇಲ್ಲಿನ ಜನರ ಪುಣ್ಯವಾಗಿದೆ. ಕೇಂದ್ರಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಮನವಿಗೆ ಸ್ವಾಮಿಜಿಗಳು ಸ್ಪಂದಿಸಿ ಮಳವಳ್ಳಿಯಲ್ಲಿ ಜಯಂತಿ ನಡೆಯಲು ಅನುಮತಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲಾ ಪಕ್ಷ, ಜನಂಗ ಸೇರಿ ಜಯಂತೋತ್ಸವವನ್ನು ಯಶಸ್ವಿಗೊಳಿಸುವುದರ ಜೊತೆಗೆ ಜಯಂತಿಯಲ್ಲಿ ಹಮ್ಮಿಕೊಂಡಿರುವ ಕೃಷಿಮೇಳ. ಆರೋಗ್ಯ ತಾಪಸಣೆ, ಪುಸ್ತಕಮೇಳ, ಅನ್ನ, ಅಕ್ಷರ ದಾಸೋಹ, ಸಾಂಸ್ಕೃತಿಕ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಕ್ತಿಪೂರ್ವಕವಾಗಿ ಸಾರ್ವಜನಿಕರು ಭಾಗವಹಿಸಿ ಹಲವು ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ವಿಧಾನಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಸುತ್ತೂರು ಸಂಸ್ಥಾನದಲ್ಲಿ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು, ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿರುವ ಜಯಂತೋತ್ಸವಕ್ಕೆ ಎಲ್ಲಾ ಜನರ ನೆರವು ಅತ್ಯಗತ್ಯವಾಗಿದೆ.. ಜಾತ್ರಾ ಮಹೋತ್ಸವದಿಂದ ಜನರ ಬದುಕಿನಲ್ಲಿ ಹೊಸ ಬೆಳಕನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿ ಕನಕಪುರದ ದೇಗುಲ ಮಠದ ಕಿರಿಯ ಚನ್ನಬಸವಸ್ವಾಮೀಜಿ ಮಾತನಾಡಿ, ಮಳವಳ್ಳಿಯಲ್ಲಿ ನಡೆಯುವ ಶ್ರೀಗಳ ಜಯಂತಿ ನಾಡಿನಲ್ಲಿ ಮಾದರಿಯಂತಿರಬೇಕು. ೪ರಿಂದ ೫ ಕೋಟಿಯಷ್ಟು ಸಂಪನ್ಮೂಲ ಸಂಗ್ರಹವಾಗಬೇಕು. ಅದರ ಜೊತೆಗೆ ತನ, ಮನ, ಧನವನ್ನು ನೀಡಿ ಸಹಕಾರ ಕೊಡಬೇಕು, ರಾಜ್ಯಕ್ಕೆ ನಾನಾ ಕೊಡುಗೆ ನೀಡಿರುವ ಸುತ್ತೂರು ಮಠಕ್ಕೆ ಜಾತಿ, ಧರ್ಮ ಭೇದಬಾವವಿಲ್ಲದೇ ದೇಶದ್ಯಾಂತ ಅಸಂಖ್ಯಾತ ಭಕ್ತರಾಗಿದ್ದಾರೆ. ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಬೌದ್ಧಬಿಕ್ಕು ಕಲ್ಯಾಣ ಬಂತೇಜಿ, ಗೌರಿ ಶಂಕರಸ್ವಾಮಿಜಿ, ಬಿಜೆಪಿ ಮುಖಂಡ ಜಿ.ಮುನಿರಾಜು, ಮನ್ ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಆರ್.ಎನ್ ವಿಶ್ವಾಸ್, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯ ಟಿ.ನಂದಕುಮಾರ್, ಮುಖಂಡರಾದ ಯಮದೂರು ಸಿದ್ದರಾಜು, ಬಿ.ರವಿ ಕಂಸಾಗರ, ವಿ.ಪಿ.ನಾಗೇಶ್, ಜಯರಾಮು, ಎಂ.ಎನ್.ಕೃಷ್ಣ, ಚಿಕ್ಕಲಿಂಗಯ್ಯ, ಟಿ.ಸಿ.ಚೌಡಯ್ಯ, ಕೆ.ಜೆ.ದೇವರಾಜು, ಬಿ.ಎಸ್.ರಾಮಚಂದ್ರು, ಸಿದ್ದೇಗೌಡ, ಅಶೋಕ್ ಕುಮಾರ್ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಇದ್ದರು.




