ಮೈಷುಗರ್ ಪ್ರೌಢಶಾಲೆಯ ಸಂಬಂಧ ಜೆಡಿಎಸ್ನ ನಾಯಕರು ಮತ್ತು ಮುಖಂಡರು ವಿನಃ ಕಾರಣ ಅನಗತ್ಯವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಆರ್ಥಿಕ ಹೊರೆ ತಪ್ಪಿಸಲು ಶಾಲೆಯನ್ನು ಗುತ್ತಿಗೆ ನೀಡಲು ಮುಂದಾಗಿದ್ದೇವೆ ಎಂದು ಮೈಷುಗರ್ ಕಂಪನಿ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಶಾಲೆಗೆ ಸಂಬಂಧಿಸಿದ ಸಮುದಾಯ ಭವನಗಳು, ವಿದ್ಯಾಸಂಸ್ಥೆಗಳ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಕೆಲವು ವರ್ಷಗಳಿಂದ ಕಂಪನಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದರು.
ಮೈಷುಗರ್ ಶಾಲೆಯಲ್ಲಿ ೨ ಶಿಕ್ಷಕರಿಗೆ ಮಾತ್ರ ಸರ್ಕಾರದಿಂದ ವೇತನ ನೀಡಲಾಗುತ್ತಿದೆ. ಹೆಚ್ಚುವರಿ ೪ ಮಂದಿ ಶಿಕ್ಷಕರು, ಹಾಗೂ ಶಿಕ್ಷಣೇತರ ಸಿಬ್ಬಂದಿಗೆ ವೇತನ ನೀಡಬೇಕಾದ ಸ್ಥಿತಿಯನ್ನು ನಿಭಾಯಿಸಬೇಕಾಗಿದೆ. ಅಲ್ಲದೇ ಶಾಲೆಗೆ ಸಂಬಂಧಿಸಿದಂತೆ ೩ ಸಮುದಾಯ ಭವನಗಳಿಂದ ವಾರ್ಷಿಕ ಒಂದು ಲಕ್ಷ ಆಸುಪಾಸಿನಲ್ಲಿ ಆದಾಯ ದೊರೆಯುತ್ತಿದ್ದು, ಗುತ್ತಿಗೆ ನೀಡುವುದರಿಂದ ೨ರಿಂದ ೨.೫ ಲಕ್ಷ ರೂ ಆದಾಯ ನಿರೀಕ್ಷಿಸಬಹುದಾಗಿದೆ ಎಂದರು ಹೇಳಿದರು.
ಮೈಷುಗರ್ ಪ್ರೌಢಶಾಲೆಯನ್ನು ೨೦ ವರ್ಷ ಅನುಭವವುಳ್ಳ ಸಂಸ್ಥೆಗಳಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿತ್ತು, ಕೊಡಿಯಾಲದ ವಿನಾಯಕ ಮತ್ತು ವರದಾ ಕೈಗಾರಿಕಾ ತರಬೇತಿ ಸಂಸ್ಥೆ, ಬಸರಾಳಿನ ಪಾಂಚಜನ್ಯ ಎಜುಕೇಷನ್ ಟ್ರಸ್ಟ್ ಹಾಗೂ ಮದ್ದೂರಿನ ಕೀರ್ತನ ಟ್ರಸ್ಟ್ ಟೆಂಡರ್ ಸಲ್ಲಿಸಿದ್ದು, ೨೦ ವರ್ಷಗಳ ಅನುಭವವುಳ್ಳ ಕೀರ್ತನ ಟ್ರಸ್ಟ್ಗೆ ಗುತ್ತಿಗೆ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಅಗತ್ಯಕ್ಕಿಂತ ಕಡಿಮೆಯಿದ್ದು, ಶಿಕ್ಷಣ ಇಲಾಖೆ ಮುಚ್ಚುವಂತೆ ಆದೇಶ ನೀಡಿರುವುದು ತಿಳಿದಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ವಿರುದ್ಧ ಹಗಲು ದರೋಡೆಯ ಪದಬಳಕೆ ಮಾಡಿರುವುದು ಖಂಡಿಸುವುದಾಗಿ ತಿಳಿಸಿದ ಅವರು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾನಸಿಕ ಸ್ಥಿಮಿತಿ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಮೈಷುಗರ್ ಕಂಪನಿಯಲ್ಲಿ ಕಬ್ಬು ನುರಿಸುವ ಟನ್ ಕಬ್ಬಿನ ೪ ರೂ ಹಾಗೂ ರೈತರಿಂದ ಟನ್ ಕಬ್ಬಿಗೆ ೪ ರೂ ಸೇರಿ ಒಟ್ಟಾಗಿ ನೀಡಲಾಗುವ ೮ ರೂಪಾಯಿಯಲ್ಲಿ ಯಾವುದೇ ಬಾಕಿ ಉಳಿಸಿಕೊಳ್ಳದಿದ್ದರೂ, ಕಳೆದ ಆರು ತಿಂಗಳಿನಿಂದ ೧೮ ಲಕ್ಷ ರೂ.ಗಳ ವೇತನದ ಬಾಕಿ ಉಳಿದಿದ್ದು, ಇದನ್ನು ಪಾವತಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಪ್ರಶ್ನೆಗೆ ಉತ್ತರಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಕಿಸಾನ್ ಜಿಲ್ಲಾಧ್ಯಕ್ಷ ಬೋರೇಗೌಡ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ವಿಜಿಕುಮಾರ್, ಸ್ವಾಮೀಗೌಡ, ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ವಕೀಲ ಸುಂಡಹಳ್ಳಿ ಮಂಜುನಾಥ್, ಸಾತನೂರು ಕೃಷ್ಣ ಇದ್ದರು.




